ಶಿರಹಟ್ಟಿ: ‘ನರೇಗಾ ಯೋಜನೆಯು ಉದ್ಯೋಗಕ್ಕಾಗಿ ವಲಸೆ ಹೋಗುವ ಗ್ರಾಮೀಣ ಜನರನ್ನು ತಡೆಯುವುದಲ್ಲದೆ, ಆ ಭಾಗದ ಜನರ ಜೀವನಕ್ಕೆ ಆಧಾರ ಸ್ತಂಭವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ರಾಮಣ್ಣ ದೊಡ್ಡಮನಿ ಹೇಳಿದರು.
ತಾಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ 2025-26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕಂದಕ ಬದು ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ಮಾಡಿ ಮಾತನಾಡಿದ ಅವರು, ಕೂಲಿಕಾರರಿಗೆ ಕೆಲಸದ ಪ್ರಮಾಣ, ಕೂಲಿ ಮೊತ್ತ, ಎನ್ಎಂಎಂಎನ್ ಹಾಜರಾತಿ ಕುರಿತು ಮಾಹಿತಿ ನೀಡಿದರು.
ಕಂದಕಗಳ ಅಳತೆ ಪ್ರಮಾಣ ಪರಿಶೀಲಿಸಿದ ಅವರು, ‘ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರಿಗೆ ಮತ್ತು ಪುರುಷರಿಗೆ ತಾರತಮ್ಯವಿಲ್ಲದೆ ವೇತನವನ್ನು ನೀಡುವ ಮೂಲಕವಾಗಿ ನಿರಂತರ ಕೆಲಸವನ್ನು ಕೊಡಲಾಗುತ್ತಿದೆ’ ಎಂದರು.
‘ಜಾಬ್ ಕಾರ್ಡ್ ಇಲ್ಲದಿರುವ ಕೂಲಿ ಕಾರ್ಮಿಕರು ತಕ್ಷಣವೇ ದಾಖಲಾತಿ ನೀಡಿ, ಹೊಸ ಕಾರ್ಡ್‌ಗಳನ್ನು ಪಡೆದು ಯೋಜನೆಯ ಲಾಭ ಪಡೆಯಬೇಕು. ಪ್ರಸ್ತುತ ಬಿಸಿಲು ಹೆಚ್ಚಾಗಿರುವುದರಿಂದ ಕಾರ್ಮಿಕರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯವು ಬಹು ಮುಖ್ಯವಾಗಿದ್ದು, ಹೆಚ್ಚು ನೀರನ್ನು ಕುಡಿಯಬೇಕು’ ಎಂದು ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸುರೇಶ ಕಲ್ಲವಡ್ಡರ, ತಾಂತ್ರಿಕ ಸಂಯೋಜಕ ವಿಜಯಲಕ್ಷ್ಮಿ, ಐಇಸಿ ಸಂಯೋಜಕ ವಿರೇಶ, ನರೇಗಾ ಸಿಬ್ಬಂದಿ, ಕಾಯಕ ಬಂಧುಗಳು ಹಾಗೂ ಕೂಲಿಕಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.