ಗದಗ: ಪೆಹಲ್ಗಾಮ್‍ನ ಭಯೋತ್ಪಾದಕ ಕೃತ್ಯಕ್ಕೆ ಪ್ರತೀಕಾರವಾಗಿ ಕೇಂದ್ರ ಸರ್ಕಾರ ಉಗ್ರ ನೆಲೆಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿ ಭಾರತೀಯರ ಶೌರ್ಯವನ್ನು ಜಗತ್ತಿಗೆ ಸಾರಿ ಹೇಳಿದೆ ಎಂದು ಬಿಜೆಪಿ ಮುಖಂಡ ವಿಜಯಕುಮಾರ ಗಡ್ಡಿ ತಿಳಿಸಿದ್ದಾರೆ.
‘ಭಾರತವನ್ನು ಕೆಣಕಿದರೂ, ಭಯೋತ್ಪಾದಕರು ಭಾರತೀಯ ನಾಗರಿಕರ ರಕ್ತ ಹರಿಸಿದರೂ ನಾವು ಸುಮ್ಮನೆ ಕೂರುತ್ತಿದ್ದ ಕಾಲವೊಂದಿತ್ತು. ಆದರೆ, ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತೀಯ ಸೈನ್ಯಕ್ಕೆ ಹೊಸ ತೇಜಸ್ಸು ಬಂದಿದೆ. ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ನಡೆದ ಬಾಲಾಕೋಟ್ ದಾಳಿಯಲ್ಲಿ ನಮ್ಮ ಶಕ್ತಿ ಏನೆಂದು ವಿಶ್ವಕ್ಕೆ ತೋರಿಸಿದ್ದೆವು. ಈಗ ಮತ್ತೊಮ್ಮೆ ಉಗ್ರರು ನಮ್ಮನ್ನು ಕೆಣಕಿದಾಗ ಅವರ ಆಶ್ರಯ ತಾಣಗಳನ್ನು ನಾಶ ಮಾಡುವ `ಆಪರೇಶನ್ ಸಿಂಧೂರ್’ ಭಾರತೀಯರ ಶಕ್ತಿ ಏನೆಂದು ಮತ್ತೊಮ್ಮೆ ಸಾಬೀತು ಮಾಡಿದ್ದು, ಇಂಥ ದಿಟ್ಟ ಕ್ರಮ ಕೈಕೊಂಡ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಸೇನಾ ಮುಖಂಡರು ನಿಜಕ್ಕೂ ಅಭಿನಂದನಾರ್ಹರು’ ಎಂದಿದ್ದಾರೆ.
‘ಬಿಜೆಪಿ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಕೇಳುತ್ತಿದ್ದ ಪ್ರತಿಪಕ್ಷಗಳಿಗೆ ಇಂದು ಉತ್ತರ ಸಿಕ್ಕಿದ್ದು, ಭಾರತವನ್ನು ಕೆಣಕಿದರೆ ಪ್ರಧಾನಿ ಮೋದಿ ಪ್ರತಿಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಮತ್ತೆ ರುಜುವಾತಾಗಿದೆ. ಭಯೋತ್ಪಾದಕ ಶಕ್ತಿಗಳನ್ನು ಬುಡಸಮೇತ ನಿರ್ನಾಮ ಮಾಡುವ ಅವಶ್ಯಕತೆ ಇದ್ದು, ಇಂಥ ದುಷ್ಟ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಎದೆಯಲ್ಲೂ ಆಪರೇಶನ್ ಸಿಂದೂರ ಭಯ ಹುಟ್ಟುಹಾಕಿದೆ. ಪಾಕಿಸ್ತಾನ ಇನ್ನಾದರೂ ಉಗ್ರರಿಗೆ ಪರೋಕ್ಷ ಬೆಂಬಲ ನೀಡುವುದನ್ನು ಬಿಡಬೇಕಿದ್ದು, ಇಲ್ಲವಾದಲ್ಲಿ ಕೇಂದ್ರ ಸರ್ಕಾರ ನೇರವಾಗಿ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರೂ ಅಚ್ಚರಿ ಪಡಬೇಕಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.