ADVERTISEMENT

ಸಮಗ್ರ ಬೆಳೆಯಲ್ಲಿ ಖುಷಿ ಕಂಡ ಕುಟುಂಬ

ಸಾವಯುವ ಕೃಷಿ: ಸಾಧನೆಯ ಹಾದಿಯಲ್ಲಿ ರೈತ ಪ್ರಸಾದ ಆಡಿನ ಕುಟುಂಬ

​ಪ್ರಜಾವಾಣಿ ವಾರ್ತೆ
Published 26 ಮೇ 2022, 16:21 IST
Last Updated 26 ಮೇ 2022, 16:21 IST
ತೋಟದಲ್ಲಿನ ಶ್ರೀಗಂಧದ ಸಸಿ ಜತೆಗೆ ಸಾವಯುವ ಕೃಷಿಕ ಪ್ರಸಾದ
ತೋಟದಲ್ಲಿನ ಶ್ರೀಗಂಧದ ಸಸಿ ಜತೆಗೆ ಸಾವಯುವ ಕೃಷಿಕ ಪ್ರಸಾದ   

ಶಿರಹಟ್ಟಿ: ಅಪ್ಪಟ ದೇಸಿ ಸಾವಯುವ ಕೃಷಿಯಲ್ಲಿ ವಿವಿಧ ತಳಿಯ ಬೆಳೆಗಳನ್ನು ಬೆಳೆಯುವುದರ ಮೂಲಕ ತನ್ನದೇ ಆದ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ರೈತ ಪ್ರಸಾದ ಮತ್ತು ಅವರ ಕುಟುಂಬ ಇತರರಿಗೆ ಮಾದರಿಯಾಗಿದೆ.

ತಾಲ್ಲೂಕಿನ ಸುಗನಹಳ್ಳಿ ಗ್ರಾಮದ ಯುವ ರೈತ ಪ್ರಸಾದ ಆಡಿನ ಅವರು ಮಣ್ಣು ನಂಬಿ ಬಂಡವಾಳ ಹಾಕಿದರೆ ಭೂ ತಾಯಿ ಎಂದಿಗೂ ಕೈಬಿಡುವುದಿಲ್ಲ ಎಂಬ ದೃಢ ನಂಬಿಕೆಯಿಂದ ಶ್ರಮವಹಿಸಿ ದುಡಿಯುತ್ತಿದ್ದಾರೆ. ಸಾವಯುವ ಕೃಷಿಯಲ್ಲಿ ನಿರಂತರ ನೆಮ್ಮದಿಯ ಹಾದಿ ಕಾಣುತ್ತಿರುವ ಕುಟುಂಬ ಇವರದ್ದಾಗಿದೆ. 6 ಎಕರೆ ಜಮೀನಿನಲ್ಲಿ 3 ಕೊಳವೆಬಾವಿ ಮೂಲಕ ಸತತ ನೀರಾವರಿ ಬೇಸಾಯ ಮಾಡುತ್ತಿರುವ ರೈತ ಪ್ರಸಾದ ಅವರಿಗೆ ತಂದೆ- ತಾಯಿ, ಮಡದಿ ಹಾಗೂ ಮಕ್ಕಳು ಸಹ ಕೈ ಜೋಡಿಸಿದ್ದಾರೆ.

ಸಮಗ್ರ ಬೆಳೆಗಳ ಸಮ್ಮಿಶ್ರಣ:

ADVERTISEMENT

6 ಎಕರೆ ಜಮೀನಿನಲ್ಲಿ 1 ಎಕರೆಯಲ್ಲಿ ಬಾಳೆ ಹಾಗೂ ನುಗ್ಗೆಕಾಯಿ ಬೆಳೆಯಲಾಗಿದೆ. ಉಳಿದ ಪ್ರದೇಶದಲ್ಲಿ ಗೋಡಂಬಿ, ಶ್ರೀಗಂಧ, ಪೇರಲ, ಅಂಜೂರ, ಮಾಗನಿ, ಹೆಬ್ಬೇವು, ತೆಂಗು, ಪಪ್ಪಾಯ, ಕರಿಬೇವು ಸೇರಿದಂತೆ ವಿವಿಧ ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇವುಗಳಿಗೆ ಯಾವುದೇ ರಾಸಾಯನಿಕ ಸಿಂಪಡಣೆ ಮಾಡದೆ ಶುದ್ಧ ಸಾವಯುವದಲ್ಲಿ ಬೆಳೆಸುತ್ತಿರುವುದು ವಿಶೇಷವಾಗಿದೆ.

ಘನ ಜೀವಾಮೃತ:

ಯುವ ರೈತ ಪ್ರಸಾದ ಅವರು ರಾಸಾಯನಿಕ ಗೊಬ್ಬರದ ಗೋಜಿಗೆ ಹೋಗದೇ ಸ್ವತಃ ಸಾವಯುವ ಗೊಬ್ಬರ ತಯಾರಿಸುತ್ತಾರೆ. ಅದನ್ನೇ ತಮ್ಮ ಜಮೀನಿಗೆ ಬಳಸುವುದರಿಂದ ಮಣ್ಣಿನಲ್ಲಿ ಫಲವತ್ತತೆ ಹೆಚ್ಚಾಗಿ ಬೆಳೆಗಳು ಉತ್ತಮ ಫಸಲು ನೀಡುತ್ತಿವೆ. ಎರೆಹುಳು ಗೊಬ್ಬರದ ತಯಾರಿಕೆಯೊಂದಿಗೆ ತೋಟದಲ್ಲಿನ ಗೋವಿನ ಸಗಣಿ ಬಳಸಿ ಘನ ಜೀವಾಮೃತ ತಯಾರಿಸುತ್ತಾರೆ. ಇದು ಬೆಳೆಗಳಿಗೆ ಹೆಚ್ಚಾಗಿ ರೋಗ ನಿರೋಧಕವನ್ನು ಒದಗಿಸುತ್ತದೆ. ಅಲ್ಲದೇ ನೀರಿನಲ್ಲಿ ತ್ಯಾಜ್ಯಗಳನ್ನು ಹಾಕಿ ಬಯೋ ಡೈಜೆಸ್ಟರ್‌ ತಯಾರಿಸಿ ಬೆಳೆಗಳಿಗೆ ನೀಡುತ್ತಾರೆ.

ಬೆಳೆಗಳ ಮಧ್ಯ ಬೆಳೆ:

ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ರೈತ ಪ್ರಸಾದ ಒಂದು ಗಿಡದಿಂದ ಇನ್ನೊಂದು ಗಿಡದ ಮಧ್ಯದಲ್ಲಿ ಚೆಂಡ ಹೂ, ಹಿರೇಕಾಯಿ, ಟೊಮೊಟೊ, ಮೆಣಸಿನಕಾಯಿ, ಬದನೆ ಸೇರಿದಂತೆ ವಿವಿಧ ತರಕಾರಿ ಹಾಗೂ ಹೂವಿನ ಬೆಳೆಗಳನ್ನು ಬೆಳೆದು ಲಾಭ ಗಳಿಸುತ್ತಿದ್ದಾರೆ.

ಹೈನುಗಾರಿಕೆ ಹಾಗೂ ಕುರಿ ಸಾಕಣೆ:

ದೇಸಿ ಕೃಷಿಯನ್ನು ಅವಲಂಬಿಸಿರುವ ರೈತ ಪ್ರಸಾದ ಸದ್ಯ ದೇಸಿ ತಳಿಯ ಹಸುಗಳನ್ನು ಕಟ್ಟಿದ್ದಾರೆ. ಕೃಷಿಯೊಂದಿಗೆ ಉತ್ತಮ ಹೈನುಗಾರಿಕೆಯನ್ನು ಸಹ ಮಾಡಲು ಹೊರಟ ಇವರು ಶೀಘ್ರದಲ್ಲಿ 5 ರಿಂದ 6 ಹಸುಗಳನ್ನು ತರಲಿದ್ದಾರೆ. ಕುರಿ ಸಾಕಣೆಗೆ ಒತ್ತು ನೀಡಿರುವ ಇವರು ತೋಟದಲ್ಲಿ ಕುರಿಗಳನ್ನು ಸಾಕಲು ಪ್ರಾರಂಭಿಸಿದ್ದಾರೆ. ಇದರಿಂದ ಕುರಿ ವ್ಯಾಪಾರದಿಂದ ಬರುವ ಲಾಭ ಒಂದೆಡೆಯಾದರೆ; ಅದರ ಗೊಬ್ಬರ ಬೆಳೆಗಳಿಗೆ ಉತ್ತಮ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.

ಸ್ಥಳೀಯವಾಗಿ ಸಾವಯುವ ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿರುವ ಭೂತಾಯಿ ಸಾವಯುವ ಸಂಘದ ನಿರ್ದೇಶಕನಾದ ಪ್ರಸಾದ ಆಡಿನ ಅವರಿಗೆ ಆತ್ಮ ಯೋಜನೆಯಡಿಯಲ್ಲಿ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಲಭಿಸಿರುವುದು ಅವರ ಸಾಧನೆಗೆ‌ ಮತ್ತಷ್ಟು ಪುಷ್ಟಿ ನೀಡಿದೆ.

ಸ್ವತಃ ಮಾರಾಟ ಮಾಡುವ ರೈತ

ತೋಟದಲ್ಲಿ ಬೆಳೆದ ತರಕಾರಿ ಬೆಳೆಗಳನ್ನು ರೈತ ಪ್ರಸಾದ ಸ್ವತಃ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ನಡೆಯುವ ಸಂತೆಯಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಸಂತೆಯಲ್ಲಿ ಸ್ವತಃ ಮಾರಾಟ ಮಾಡುತ್ತಿದ್ದು, ಈ ಮೂಲಕ ದಲ್ಲಾಳಿಗಳ ಹೊರೆಯಿಂದ ತಪ್ಪಿಸಿಕೊಂಡಿದ್ದಾರೆ. ಅಲ್ಲದೇ ಸಮಯದ ಅಭಾವದಲ್ಲಿ ಮುಂಡರಗಿ, ಶಿರಹಟ್ಟಿ, ಗದಗ ಮಾರುಕಟ್ಟೆಗೆ ಫಸಲನ್ನು ಕಳುಹಿಸಲಾಗುತ್ತಿದೆ. ತೋಟದಲ್ಲಿ ಸಸಿ ನಾಟಿ ಮಾಡಿ 2 ವರ್ಷ ಆಗಿದ್ದು, ಈಗಾಗಲೇ ಖರ್ಚು ಕಳೆದು ವರ್ಷಕ್ಕೆ ₹3.50 ಲಕ್ಷ ನಿವ್ವಳ ಲಾಭ ಗಳಿಸುತ್ತಿದ್ದಾರೆ.

ಸಾವಯುವ ಸಮಗ್ರ ಕೃಷಿ ಮಾಡಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾರ್ಗದರ್ಶನ ಮಾಡಿದ್ದಾರೆ. ಅವರು ನೀಡಿರುವ ಮಿನಿ ಟ್ರ್ಯಾಕ್ಟರ್‌ನಿಂದ ಆಳಿನ ಸಮಸ್ಯೆ ಕಡಿಮೆಯಾಗಿದ್ದು, ಕುಟುಂಬದವರೇ ಎಲ್ಲಾ ಕೆಲಸ ಮಾಡುತ್ತೇವೆ
ಪ್ರಸಾದ ಆಡಿನ, ಸಾವಯವ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.