ADVERTISEMENT

ಸಾವಯವ ರೇಷ್ಮೆ ಕೃಷಿಯಲ್ಲಿ ಯಶಸ್ಸು ಕಂಡ ರೈತ: 3 ಎಕರೆಲಿ ವರ್ಷಕ್ಕೆ ₹5 ಲಕ್ಷ ಲಾಭ

ವರ್ಷಕ್ಕೆ ₹5 ಲಕ್ಷ ಲಾಭ: ಹಾಲು ಉತ್ಪಾದನೆಯಿಂದ ಪ್ರತಿ ತಿಂಗಳು ₹35 ಸಾವಿರ ಲಾಭ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 3:11 IST
Last Updated 2 ಜನವರಿ 2026, 3:11 IST
ರೇಷ್ಮೆ ಬೆಳೆಯೊಂದಿಗೆ ರೈತ ಮೈಲಾರಪ್ಪ ಕರಮುಡಿ
ರೇಷ್ಮೆ ಬೆಳೆಯೊಂದಿಗೆ ರೈತ ಮೈಲಾರಪ್ಪ ಕರಮುಡಿ   

ಶಿರಹಟ್ಟಿ: ಅಚ್ಚಕಟ್ಟಾಗಿ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ರೇಷ್ಮೆ ಕೃಷಿಯಲ್ಲಿ ಶ್ರಮವಹಿಸಿ ದುಡಿಯುತ್ತಿರುವ ಖಾನಾಪುರ ಗ್ರಾಮದ ರೈತ ಮೈಲಾರಪ್ಪ ಕರಮುಡಿ ಹೆಚ್ಚಿನ ಲಾಭಾಂಶ ಪಡೆಯುವುದರೊಂದಿಗೆ ತಾಲ್ಲೂಕಿನ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.1ರ ಖಾನಾಪುರದ ರೈತ ಮೈಲಾರಪ್ಪ ಕರಮುಡಿ ಮೂರು ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿಯೊಂದಿಗೆ ನೆಮ್ಮದಿ ಕಂಡುಕೊಂಡಿದ್ದಾರೆ. ಉಳಿದ ನಾಲ್ಕು ಎಕರೆ ಜಮೀನಿನಲ್ಲಿ ಒಣ ಬೇಸಾಯ ಮಾಡುತ್ತಿದ್ದಾರೆ. ತೋಟದಲ್ಲಿ ಕೊಳವೆಬಾವಿ ಕೊರೆಸಿ, ಹನಿ ನೀರಾವರಿ ಪದ್ದತಿ ಅಳವಡಿಸಿದ್ದಾರೆ. ತಂದೆ ಲಿಂಗರಾಜ, ಸಹೋದರಿ ಹಾಗೂ ಕುಟುಂಬದೊಂದಿಗೆ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.

ರೇಷ್ಮೆ ಬೆಳೆಯನ್ನು ಮುಖ್ಯ ಬೆಳೆಯನ್ನಾಗಿಸಿಕೊಂಡ ರೈತ ಮೈಲಾರಪ್ಪ ಇಡೀ ವರ್ಷ ರೇಷ್ಮೆ ಬೆಳೆ ಬರುವ ಹಾಗೆ ಯೋಜನೆ ರೂಪಿಸಿ 3 ಎಕರೆಯಲ್ಲಿ ಪ್ರತ್ಯೇಕ ಫ್ಲಾಟ್ ಮಾಡಿಕೊಂಡಿದ್ದಾರೆ. 1.5 ಎಕರೆಗೊಂದು ಫ್ಲಾಟ್ ಮಾಡಿ ರೇಷ್ಮೆ ಸಸಿಗಳನ್ನು ನಾಟಿ ಮಾಡಿರುವುದರಿಂದ ವರ್ಷ ಪೂರ್ತಿ ತೋಟದಲ್ಲಿ ರೇಷ್ಮೆ ಗೂಡುಗಳ ಉತ್ಪಾದನೆ ಇರುತ್ತದೆ. ರೇಷ್ಮೆ ಬೆಳೆಗೆ ವರ್ಷಕ್ಕೆ ಸುಮಾರು 20 ಗಾಡಿ ಸಗಣಿ ಗೊಬ್ಬರ ಹಾಕುತ್ತಿದ್ದಾರೆ. ಸುಮಾರು 5 ವರ್ಷಗಳಿಂದ ರೇಷ್ಮೆ ಕೃಷಿ ಮಾಡಿಕೊಂಡು ಬರುತ್ತಿರುವ ಅವರು ಪ್ರತಿ ಬಾರಿ 1-2 ಕ್ವಿಂಟಲ್ ಇಳುವರಿ ಪಡೆಯುತ್ತಾರೆ. ರಾಮನಗರ ಮಾರುಕಟ್ಟೆಗೆ ಗೂಡುಗಳನ್ನು ಮಾರಾಟ ಮಾಡಿ ಉತ್ತಮ ಲಾಭ ಪಡೆಯುತ್ತಿದ್ದಾರೆ.

ರೇಷ್ಮೆ ಹುಳುವಿನ ನಿರ್ವಹಣೆ:

ADVERTISEMENT

ಹಿಪ್ಪುನೇರಳೆ ಬೆಳೆಗೆ ಒತ್ತು ನೀಡುತ್ತಿರುವ ಅವರು ಹೆಚ್ಚು ಹಸಿರೆಲೆ ಗೊಬ್ಬರ, ತಿಪ್ಪೇ ಗೊಬ್ಬರ ಬಳಸಿ ತೋಟದ ನಿರ್ವಹಣೆ ಮಾಡುತ್ತಿದ್ದಾರೆ. ಹುಳು ಸಾಕಣೆ ಘಟಕದಲ್ಲಿ ಸದಾ ಗಾಳಿಯಾಡುವಂತೆ ವ್ಯವಸ್ಥೆ ಮಾಡಿದ್ದು, ಸೊಳ್ಳೆ ಅಥವಾ ನೊಣ ಸಹ ಸುಳಿಯದ ರೀತಿ ಪರದೆ ಕಟ್ಟಿದ್ದಾರೆ. ಘಟಕವನ್ನು ಹೆಚ್ಚು ಸ್ವಚ್ಛವಾಗಿಟ್ಟುಕೊಂಡರೆ ಉತ್ತಮ ಹಾಗೂ ಬೇಗ ಇಳುವರಿ ಪಡೆಯಬಹುದು. ಅಲ್ಲದೇ ಹಸಿರು ನೆಟ್ ಕಟ್ಟಿದ್ದು, ನಿಯಮಿತವಾಗಿ ಹುಳು ಸಾಕಾಣಿಕೆಯ ಮನೆಯನ್ನು ಸೋಂಕು ನಿವಾರಕ ದ್ರಾವಣ ಬಳಸಿ ತೊಳೆದು ಸ್ವಚ್ಛಗೊಳಿಸುತ್ತಾರೆ.

ವರ್ಷಕ್ಕೆ ಲಕ್ಷಾಂತರ ಆದಾಯ

ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ರೇಷ್ಮೆ ಗೂಡಿಗೆ ₹ 700ರಿಂದ ₹800 ದರ ಇದೆ. ಒಂದು ವರ್ಷದಲ್ಲಿ 8ರಿಂದ 10 ಬೆಳೆಗಳನ್ನು ತೆಗೆಯುವ ಮೈಲಾರಪ್ಪ ವರ್ಷಕ್ಕೆ ₹6 ಲಕ್ಷದಿಂದ ₹7 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಅದರಲ್ಲಿ ವರ್ಷದಲ್ಲಿ ₹2 ಲಕ್ಷ ಖರ್ಚು ತೆಗೆದು ₹5 ಲಕ್ಷ ಲಾಭ ಪಡೆಯುತ್ತಿದ್ದಾರೆ. ಇದರ ಜೊತೆಗೆ ತೋಟದಲ್ಲಿನ ಇತರೆ ಹಾಗೂ ಒಣ ಬೇಸಾಯದ ಜಮೀನಿನಲ್ಲಿ ಬೆಳೆಯಲಾದ ಗೋವಿನಜೋಳ, ಹೆಸರು, ಶೇಂಗಾ ಸೇರಿದಂತೆ ಇತರೆ ಬೆಳೆಗಳಿಂದಲೂ ಆದಾಯ ಪಡೆಯುತ್ತಿದ್ದಾರೆ.

ಕೃಷಿಯೊಂದಿಗೆ ಹೈನುಗಾರಿಕೆ

ರೇಷ್ಮೆ ಕೃಷಿಯೊಂದಿಗೆ 15 ಹಸುಗಳನ್ನು ಸಾಕಣೆ ಮಾಡುತ್ತಿರುವ ರೈತ ಮೈಲಾರಪ್ಪ ಅದರಲ್ಲೂ ಲಾಭದಲ್ಲಿದ್ದಾರೆ. ಸದ್ಯ 6 ಹಸುಗಳಿಂದ ಒಪ್ಪತ್ತಿಗೆ 25 ಲೀಟರ್ ಹಾಲು ಕರೆಯುತ್ತಿದ್ದಾರೆ. ತಿಂಗಳಿಗೆ ಸುಮಾರು ₹80 ಸಾವಿರ ಆದಾಯ ಬರುತ್ತಿದ್ದು, ಹಸುಗಳ ಆಹಾರಕ್ಕಾಗಿ ತಿಂಗಳಿಗೆ ₹40 ಸಾವಿರ ಖರ್ಚು ಮಾಡುತ್ತಾರೆ. ಉಳಿದಿದ್ದು ಲಾಭವಾಗಿದೆ. ವಾರ್ಷಿಕವಾಗಿ ಇದರಿಂದಲೂ ಸುಮಾರು ₹3 ಲಕ್ಷದಿಂದ ₹4 ಲಕ್ಷ ಗಳಿಸುತ್ತಿದ್ದಾರೆ. ಅಲ್ಲದೇ ಹಸುಗಳಿಂದ ವರ್ಷಕ್ಕೆ ಸುಮಾರು 20 ಗಾಡಿ ಗೊಬ್ಬರ ಉತ್ಪತ್ತಿಯಾಗುತ್ತಿದ್ದು, ಇದನ್ನು ಮಾರಾಟ ಮಾಡದೆ ತಮ್ಮ ಜಮೀನಿಗೆ ಉಪಯೋಗಿಸುತ್ತಿದ್ದಾರೆ. ತೋಟದಲ್ಲಿ ರೇಷ್ಮೆ ಸೊಪ್ಪು ಹೇರಳವಾಗಿರುವುದರಿಂದ ಮೇವಿನ ಕೊರತೆ ತಲೆದೋರಿಲ್ಲ. ರೇಷ್ಮೆ ಬೆಳೆಗೆ ಸಗಣಿ ಗೊಬ್ಬರ ಬಳುಸುವುದರಿಂದ ಬೆಳೆಗೆ ರೋಗಬಾಧೆ ಇಲ್ಲದೇ; ಉತ್ತಮ ಇಳುವರಿ ಬರುತ್ತದೆ ಎಂಬುದು ಅವರ ಅನುಭವದ ಮಾತು.

---

ರೇಷ್ಮೆ ಹುಳುಗಳು ನಾಲ್ಕನೇ ಜ್ವರಕ್ಕೆ ಬಂದಾಗ ಆಳಿನ ಅವಶ್ಯಕತೆ ಬೀಳುತ್ತಿದ್ದು ಹೆಚ್ಚಿನ ಹಣಕೊಟ್ಟು ಆಳುಗಳನ್ನು ಕರೆತರುವ ಪರಿಸ್ಥಿತಿ ನಿರ್ಮಾಣವಾಗಿದೆ.

-ಮೈಲಾರಪ್ಪ ಕರಮುಡಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.