ADVERTISEMENT

ಆರ್‌ಡಿಪಿಆರ್ ವಿ.ವಿ ಕ್ಯಾಂಪಸ್‌ನಲ್ಲಿ ಆಕ್ಸಿಜನ್‌ ಪಾರ್ಕ್‌..!

ಜಿಲ್ಲಾಡಳಿತ, ವಿಶ್ವವಿದ್ಯಾಲಯ, ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ವಿನೂತನ ಯೋಜನೆ

ಜೋಮನ್ ವರ್ಗಿಸ್
Published 24 ಜೂನ್ 2018, 20:16 IST
Last Updated 24 ಜೂನ್ 2018, 20:16 IST
ಗದುಗಿನ ನಾಗಾವಿ ಗುಡ್ಡದಲ್ಲಿ ಗ್ರಾಮೀಣಾಭಿವೃದ್ಧಿ ವಿವಿ ಕ್ಯಾಂಪಸ್‌ಗಾಗಿ ಗುರುತಿಸಿರುವ ಪ್ರದೇಶದಲ್ಲಿ ನೆಡಲಾಗಿರುವ ಅರಳಿ ಮರಗಳಲ್ಲಿ ಚಿಗುರೆಲೆ ಮೂಡಿರುವುದು
ಗದುಗಿನ ನಾಗಾವಿ ಗುಡ್ಡದಲ್ಲಿ ಗ್ರಾಮೀಣಾಭಿವೃದ್ಧಿ ವಿವಿ ಕ್ಯಾಂಪಸ್‌ಗಾಗಿ ಗುರುತಿಸಿರುವ ಪ್ರದೇಶದಲ್ಲಿ ನೆಡಲಾಗಿರುವ ಅರಳಿ ಮರಗಳಲ್ಲಿ ಚಿಗುರೆಲೆ ಮೂಡಿರುವುದು   

ಗದಗ: ಇಲ್ಲಿನ ನಾಗಾವಿ ಗುಡ್ಡದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ (ಆರ್‌ಡಿಪಿಆರ್‌) ಹೊಸ ಕ್ಯಾಂಪಸ್‌ನಲ್ಲಿ ‘ಆಮ್ಲಜನಕ ಉದ್ಯಾನ’ (ಆಕ್ಸಿಜನ್‌ ಪಾರ್ಕ್‌) ತಲೆ ಎತ್ತುತ್ತಿದೆ.

ದೇಶದಲ್ಲೇ ಮೊದಲ ‘ಆರ್‌ಡಿಪಿಆರ್‌’ವಿ.ವಿ ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಗದುಗಿನದು. ಇದೇ ವಿ.ವಿಯ ಕ್ಯಾಂಪಸ್‌ನಲ್ಲಿ ಹೊಸ ಪರಿಕಲ್ಪನೆ ಎನಿಸಿರುವ ‘ಆಕ್ಸಿಜನ್‌ ಪಾರ್ಕ್‌’ ಅಸ್ತಿತ್ವಕ್ಕೆ ಬರುತ್ತಿರುವುದು ವಿಶೇಷ.

ಕಳೆದ ಮುಂಗಾರಿನಲ್ಲಿ ಗದಗ–ಹುಬ್ಬಳ್ಳಿ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಮರಗಳ ಮಾರಣಹೋಮ ತಪ್ಪಿಸಲು, ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ‘ಮರಗಳನ್ನು ಸ್ಥಳಾಂತರಿಸಿ’ ನೆಡುವ ಯೋಜನೆ ಜಾರಿಗೊಳಿಸಿತ್ತು. ತೆರವುಗೊಳಿಸಲಾದ ಒಟ್ಟು 500 ಮರಗಳ ಪೈಕಿ, 218 ಅರಳಿ ಮರಗಳನ್ನು ‘ಆರ್‌ಡಿಪಿಆರ್‌’ ವಿ.ವಿ ಕ್ಯಾಂಪಸ್‌ಗಾಗಿ ಗುರುತಿಸಲಾದ ಸ್ಥಳದಲ್ಲಿ ನೆಡಲಾಗಿತ್ತು. ಇವುಗಳಲ್ಲಿ ಈಗ ಚಿಗುರೆಲೆ ಮೂಡಿದ್ದು, ಶೇ 90ರಷ್ಟು ಬದುಕಿ ಉಳಿದಿವೆ.

ಸದ್ಯ ಗದಗ ನಗರದ ರೈತ ಭವನದಲ್ಲಿ ‘ಆರ್‌ಡಿಪಿಆರ್’ ವಿ.ವಿ ಕಾರ್ಯನಿರ್ವಹಿಸುತ್ತಿದೆ. ಹೊಸ ಕ್ಯಾಂಪಸ್‌ಗಾಗಿ ನಾಗಾವಿ ಗುಡ್ಡದಲ್ಲಿ 353 ಎಕರೆ ಪ್ರದೇಶ ಗುರುತಿಸಲಾಗಿದೆ. ಇದರಲ್ಲಿ 6 ಎಕರೆ ಪ್ರದೇಶದಲ್ಲಿ ಈ ಮರಗಳನ್ನು ನೆಡಲಾಗಿದೆ. ಈ ಪ್ರದೇಶವನ್ನೇ ‘ಆಮ್ಲಜನಕ ಉದ್ಯಾನ’ವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

‘ಅರಳಿ ಮರಗಳು ಆಮ್ಲಜನಕದ ಆಗರ. ನಗರದ ವಾಯುಮಾಲಿನ್ಯ ನಿಯಂತ್ರಣದಲ್ಲೂ ಈ ಮರಗಳ ಕೊಡುಗೆ ಮಹತ್ವದ್ದು. ಸ್ಥಳಾಂತರಿಸಿ ನೆಡಲಾದ ಈ ಮರಗಳ ತೋಟವನ್ನೇ ನೈಸರ್ಗಿಕ ಆಮ್ಲಜನಕ ವಲಯ ಎಂದು ಹೆಸರಿಸಿದ್ದೇವೆ. ಬಹುವಿಶಾಲವಾಗಿ ಹರಡಿರುವ ಈ ಕ್ಯಾಂಪಸ್‌ ಅನ್ನು ಹಂತ ಹಂತವಾಗಿ ಹಸಿರೀಕರಣ ಮಾಡಲು ನಿರ್ಧರಿಸಿದ್ದೇವೆ. 10ರಿಂದ 15 ವರ್ಷಗಳ ಬಳಿಕ ಇದರ ಸಂಪೂರ್ಣ ಫಲಗಳು ಗೋಚರಿಸಲಿವೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ತಿಮ್ಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಮ್ಲಜನಕ ತೋಟ’ದ ರಕ್ಷಣೆಗಾಗಿ ವಿ.ವಿ ಒಬ್ಬ ಕಾವಲುಗಾರನನ್ನು ನೇಮಿಸಿದೆ. ಇಲ್ಲಿರುವ ಕೊಳವೆ ಬಾವಿಯ ನೀರನ್ನು ಹನಿ ನೀರಾವರಿ ಪದ್ಧತಿ ಮೂಲಕ ಮರಗಳಿಗೆ ನೀಡಲಾಗುತ್ತಿದೆ. ಇತ್ತೀಚೆಗೆ ಧಾರಾಕಾರ ಮಳೆಯಾಗಿರುವುದರಿಂದ ಕೊಳವೆಬಾವಿಯಲ್ಲಿ ಸಮೃದ್ಧ ಜೀವಜಲ ಉಕ್ಕಿದೆ.

ಸ್ಥಳಾಂತರ ಯಶಸ್ವಿ; ಜಿಲ್ಲಾಡಳಿತಕ್ಕೆ ಪ್ರಶಸ್ತಿ

ಮರಗಳ ಸ್ಥಳಾಂತರ ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಒಟ್ಟು 25 ಜಾತಿಯ 500 ಮರಗಳನ್ನು ಸ್ಥಳಾಂತರಿಸಿ ಗದುಗಿನ ಭೀಷ್ಮ ಕೆರೆ ಆವರಣ, ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಗ್ರಾಮೀಣ ವಿವಿ ಆವರಣದಲ್ಲಿ ನೆಡಲಾಗಿತ್ತು. ಈಗ ಒಂದು ವರ್ಷ ಕಳೆದಿದ್ದು, ಶೇ 90ರಷ್ಟು ಮರಗಳು ಬದುಕಿ ಉಳಿದಿವೆ. ಈ ಯೋಜನೆಗಾಗಿ ರಾಷ್ಟ್ರಮಟ್ಟದ ಸ್ಕಾಚ್‌ ಆರ್ಡರ್‌ ಆಫ್‌ ಮೆರಿಟ್‌ ಪ್ರಶಸ್ತಿಯೂ ಜಿಲ್ಲಾಡಳಿತಕ್ಕೆ ಲಭಿಸಿದೆ.

ADVERTISEMENT

ಹಿಂದಿನ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ ಪಾಟೀಲ ಅವರ ದೂರದೃಷ್ಟಿಯಿಂದ ಮರ ಸ್ಥಳಾಂತರ ಯೋಜನೆ ಜಾರಿಯಾಗಿತ್ತು. ಇದರ ಫಲವಾಗಿ ಆಕ್ಸಿಜನ್‌ ಪಾರ್ಕ್‌ ನಿರ್ಮಾಣವಾಗಿದೆ
- ಪ್ರೊ.ಬಿ. ತಿಮ್ಮೇಗೌಡ, ಕುಲಪತಿ,ಗ್ರಾಮೀಣಾಭಿವೃದ್ಧಿ ವಿವಿ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.