ಗದಗ: ‘ಕಾವ್ಯಕ್ಕೆ ಕಣ್ಣಿರಬೇಕು; ಕಾವ್ಯಕ್ಕೆ ಹೃದಯವಿರಬೇಕು. ಕವಿಯಾದವನು ಒಡೆದ ಮನಸ್ಸುಗಳನ್ನು ಕಟ್ಟುತ್ತಾ ಸಮ ಸಮಾಜ ನಿರ್ಮಿಸಿ, ಓದುಗರ ಅಂತರಂಗದಲ್ಲಿ ಉಳಿಯುವಂತವನಾಗಿರಬೇಕು’ ಎಂದು ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಹೇಳಿದರು.
ಚಕೋರ ಸಾಹಿತ್ಯ ವೇದಿಕೆ ಮತ್ತು ಡಾ. ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಒಂದು ಹನಿ ಮಸಿ; ಕೋಟಿ ಜನಕ್ಕೆ ಬಿಸಿ. ನಮ್ಮ ವಿಷಯದ ಬರವಣಿಗೆ ಆ ರೀತಿಯಲ್ಲಿರಬೇಕು. ಸ್ವಾಸ್ಥ್ಯ ಸಮಾಜಕ್ಕೆ ಕವಿಯ ಸ್ವಾಸ್ಥ್ಯ ಅಕ್ಷರಗಳು ಬೇಕು’ ಎಂದು ಹೇಳಿದರು.
ಬಸವೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಕೆ.ಪಿ. ಹಂಡಿ ‘ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬದುಕು ಬರಹ’ ವಿಷಯದ ಕುರಿತು ಉಪನ್ಯಾಸ ನೀಡಿ, ‘ಈ ದೇಶಕ್ಕೆ, ಕನ್ನಡ ನಾಡು–ನುಡಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೊಡುಗೆ ಬಹಳಷ್ಟಿದೆ’ ಎಂದರು.
‘ಗಾಂಧೀಜಿಯವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಸ್ವಾತಂತ್ರ್ಯ ಹೋರಾಟ ತೊಡಗಿಸಿಕೊಂಡು ಜೈಲುವಾಸ ಅನುಭವಿಸಿದರು. ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಹಲವು ಪ್ರಬಂಧ ಹಾಗೂ ಕೃತಿಗಳು ಚಲನಚಿತ್ರಗಳಾಗಿ ಜನಮನ್ನಣೆ ಗಳಿಸಿವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಅರ್ಜುನ ಗೊಳಸಂಗಿ ಮಾತನಾಡಿ, ಕಾವ್ಯ ಸಮ ಹಣತೆಯನ್ನು ಹಚ್ಚುವಂತಿಬೇಕು ಎಂದರು.
ದಸರಾ ಕವಿಗೋಷ್ಠಿಯಲ್ಲಿ ನೀಲಮ್ಮ ಅಂಗಡಿ, ಮಂಗಳಗೌರಿ ಹಿರೇಮಠ, ದೀನಬಂಧು ಆದಿ, ಭಾಗ್ಯ ಹುರಕಡ್ಲಿ, ಶಾರದಾ ಬಾನದ, ಗಣೇಶ ಪಾಟೀಲ, ಮಹೇಶ್ ಕೆರಿ, ರಮಾ ಚಿಗಟೇರಿ, ಪದ್ಮಾ ಕಬಾಡಿ, ಪ್ರಿಯಾಂಕ ಹನುಮರ ಕವಿತೆಗಳನ್ನು ವಾಚಿಸಿದರು.
ಪ್ರೊ. ಎಸ್.ಯು.ಸಜ್ಜನಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕಿ ಶಿಲ್ಪಾ ಮ್ಯಾಗೇರಿ ಸ್ವಾಗತಿಸಿದರು. ಮಹೇಶ ಕೆರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.