ಗದಗ: ‘ಪತ್ರಕರ್ತರು ಸಾಮಾಜಿಕ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ ಹೇಳಿದರು.
ಗದಗ-ಬೆಟಗೇರಿ ರೋಟರಿ ಕ್ಲಬ್‌ನ ಉಷಾದೇವಿ ಜಿ.ಕುಷ್ಟಗಿ ರೋಟರಿ ಕಮ್ಯೂನಿಟಿ ಕೇರ್ ಸೆಂಟರ್‌ನಲ್ಲಿ ಏರ್ಪಡಿಸಿದ್ದ ಸಾಪ್ತಾಹಿಕ ಸಭೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಾಮಾಜಿಕ ಬದ್ಧತೆ, ಸೂಕ್ಷ್ಮತೆ ಇಲ್ಲದವರು ಪತ್ರಕರ್ತರಾಗಲು ಸಾಧ್ಯವಿಲ್ಲ. ಸಮಾಜದ ಸ್ವಾಸ್ಥ್ಯ ಕಾಪಾಡುವುದು ಕೂಡ ಪತ್ರಕರ್ತರ ಕರ್ತವ್ಯವಾಗಿದೆ. ಬ್ರೇಕಿಂಗ್ ನ್ಯೂಸ್ ನೀಡುವ ಭರಾಟೆಯಲ್ಲಿ ಸುದ್ದಿಯ ನೈಜತೆಗೆ ಧಕ್ಕೆ ಆಗಬಾರದು, ವಾಸ್ತವಿಕ ಸುದ್ದಿಗಳು ಸಾರ್ವಜನಿಕರ ಗಮನ ಸಳೆಯುತ್ತವೆ’ ಎಂದರು.
ಪತ್ರಕರ್ತ ಬಸವರಾಜ ದಂಡಿನ ಮಾತನಾಡಿ, ‘ಪತ್ರಕರ್ತರು ಸಂಯಮ, ಬದ್ಧತೆ ಮತ್ತು ಸಾಮಾಜಿಕ ಹೊಣೆಗಾರಿಕೆ ವೃತ್ತಿಯಲ್ಲಿ ರೂಢಿಸಿಕೊಳ್ಳುವುದು ಅವಶ್ಯಕ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರವೂ ಇದೆ. ಬೇರೆ ಜಿಲ್ಲೆಗೆ ಹೋಲಿಕೆ ಮಾಡಿದಲ್ಲಿ ಗದಗ ಪರಿಸರದಲ್ಲಿ ಆರೋಗ್ಯಕರ ವಾತಾವರಣವಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಆರ್.ಕೆ.ಗಚ್ಚಿನಮಠ ಮಾತನಾಡಿ, ‘ರೋಟರಿ ಕ್ಲಬ್‍ನ ಸಮಾಜಮುಖಿ ಹಾಗೂ ಜನಮುಖಿ ಕಾರ್ಯಗಳಿಗೆ ಗದಗದ ಪತ್ರಿಕೆಗಳು ವ್ಯಾಪಕ ಪ್ರಚಾರ ನೀಡುವ ಮೂಲಕ ನಮ್ಮನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಿದ್ದಾರೆ. ಆಡಳಿತ ಸುಧಾರಣೆ, ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ’ ಎಂದರು.
ಕಾರ್ಯದರ್ಶಿ ಸುರೇಶ ಕುಂಬಾರ ಸ್ವಾಗತಿಸಿ ನಿರೂಪಿಸಿದರು. ಸಂತೋಷ ಅಕ್ಕಿ ಹಾಗೂ ಶ್ರೀಧರ ಸುಲ್ತಾನಪೂರ ಪರಿಚಯಿಸಿದರು. ಶೈಲೇಂದ್ರ ಬಿರಾದಾರ, ಡಾ.ರಾಜಶೇಖರ ಬಳ್ಳಾರಿ, ಡಾ.ಶೇಖರ ಸಜ್ಜನರ, ಅಶೋಕ ಅಕ್ಕಿ, ಪತ್ರಕರ್ತ ಈಶ್ವರ ಬೆಟಗೇರಿ, ಶ್ರೀಧರ ಧರ್ಮಾಯತ, ಬಾಲಕೃಷ್ಣ ಕಾಮತ, ಶಿವಾಚಾರ್ಯ ಹೊಸಳ್ಳಿಮಠ, ಲಲಿತಾ ಗಚ್ಚಿನಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.