ಗದಗ: ‘ಜಾತಿ ಗಣತಿಯಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜಕ್ಕೆ ಅನ್ಯಾಯವಾಗಿದ್ದು, ರಾಜ್ಯದಲ್ಲಿ ಎಂಟು ಲಕ್ಷ ಜನಸಂಖ್ಯೆ ಇದ್ದರೂ ಕೇವಲ 27 ಸಾವಿರ ಮಂದಿ ಇದ್ದಾರೆ ಎಂದು ನಮೂದಿಸಲಾಗಿದೆ. ಆದರೆ, ಗದಗ ನಗರವೊಂದರಲ್ಲೇ ನಾವು 22 ಸಾವಿರ ಮಂದಿ ಇದ್ದೇವೆ’ ಎಂದು ಸಮಾಜದ ಮುಖಂಡ ವಸಂತಸಾ ಲದ್ವಾ ತಿಳಿಸಿದರು.
‘ಜನ ಗಣತಿ ಅಂದರೆ ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಬೇಕು. ಆದರೆ, ಯಾವ ಆಯೋಗವೂ ಈ ಕೆಲಸ ಮಾಡಿಲ್ಲ. ಹಾಗಾಗಿ, ಇದು ಜನ ಗಣತಿಯೋ; ಸ್ಯಾಂಪಲ್ ಸರ್ವೇಯೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಈವರೆಗೆ 13 ಆಯೋಗಗಳು ಬಂದರೂ ಎಸ್‌ಎಸ್‌ಕೆ ಸಮಾಜದ ನಿಖರ ಜನಸಂಖ್ಯೆ ಎಷ್ಟು ಎಂಬುದನ್ನೂ ತಿಳಿಸಿಲ್ಲ. ಇದರಿಂದ ನಮ್ಮ ಸಮಾಜಕ್ಕೆ ಅನ್ಯಾಯ ಆಗಿದೆ’ ಎಂದು ಕಿಡಿಕಾರಿದರು.
‘ಜಯಪ್ರಕಾಶ ಹೆಗಡೆ ಅವರು ಹಿಂದಿನ ಆಯೋಗದ ಅಧ್ಯಕ್ಷರು ಸಿದ್ಧಪಡಿಸಿದ ವರದಿಯನ್ನು ಕೆಲವೊಂದು ತಿದ್ದುಪಡಿ ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದಾರೆಯೇ ಹೊರತು ಜಾತಿ ಗಣತಿ ನಡೆಸಲಿಲ್ಲವೆಂದು ಹೇಳಲಾಗುತ್ತಿದೆ. ಕಾಂತರಾಜ ಆಯೋಗ 2015ರಲ್ಲಿ ಸಮೀಕ್ಷೆ ಕೈಗೊಂಡಿತ್ತೆಂದು ವರದಿಯಾಗಿದೆ. ಜಯಪ್ರಕಾಶ ಹೆಗಡೆಯವರು ಮನೆ ಮನೆಗೆ ತೆರಳಿ ಪ್ರತ್ಯಕ್ಷ ದತ್ತಾಂಶ ಕ್ರೋಡೀಕರಣ ಮಾಡಿಲ್ಲ. ಹತ್ತು ವರ್ಷಗಳ ನಂತರ ಸಮೀಕ್ಷೆಗಳನ್ನೊಳಗೊಂಡ ಮೂಲ ಪ್ರತಿ ಇಲ್ಲದೇ ಹಲವು ವಿವರಗಳನ್ನು ಕ್ರೋಡೀಕರಿಸಿ, ಉತ್ತಮಪಡಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಎಸ್‌ಕೆ ಸಮಾಜದ ಪಂಚ ಕಮಿಟಿ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ್ ಮಾತನಾಡಿ, ‘ಜಾತಿ ಗಣತಿಯಿಂದ ರಾಜ್ಯದ ಪಟ್ಟೇಗಾರ, ಪಟೇಗಾರ, ಸೋಮವಂಶ ಕ್ಷತ್ರಿಯ, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ, ಸಾವಜಿ ಸಮಾಜಕ್ಕೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅನ್ಯಾಯ ಆಗಿದೆ’ ಎಂದರು.
‘ಹುಬ್ಬಳ್ಳಿ, ಧಾರವಾಡದಲ್ಲೇ 70 ಸಾವಿರ ಜನಸಂಖ್ಯೆ ಹೊಂದಿದ್ದೇವೆ. ಇನ್ನೂ ಬೆಳಗಾವಿ, ಗದಗ, ಬಾದಾಮಿ, ಗಜೇಂದ್ರಗಡ ಸೇರಿದಂತೆ ರಾಜ್ಯದಾದ್ಯಂತ ನಮ್ಮ ಸಮಾಜದವರಿದ್ದಾರೆ. ಮುಂಬರುವ ಜಾತಿಗಣತಿಯಲ್ಲಿ ಪ್ರತಿ ಮನೆ ಮನೆಗೆ ತೆರಳಿ ಸ್ಪಷ್ಟವಾದ ಮಾಹಿತಿ ಪಡೆಯಬೇಕು’ ಎಂದು ಆಗ್ರಹಿಸಿದರು.
ಅಂಬಸಾ ಖಟವಟೆ, ರಾಜು ಬದಿ, ರವಿ ಸಿದ್ಲಿಂಗ, ಬಲರಾಂ ಬಸವಾ, ವಿನೋದ ಬಾಂಡಗೆ, ಅಂಬಸಾ ಖಟವಟೆ, ಅನಿಲ ಖಟವಟೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.