ADVERTISEMENT

ಗದಗ: ಕನ್ನಡದಲ್ಲೇ ವ್ಯವಹರಿಸಲು ಕರವೇ ತಾಕೀತು

ಹಿಂದಿ ದಿವಸ್ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 5:35 IST
Last Updated 15 ಸೆಪ್ಟೆಂಬರ್ 2021, 5:35 IST
ಬ್ಯಾಂಕ್‌ಗಳಲ್ಲಿ ಕನ್ನಡದಲ್ಲೇ ಸೇವೆ ಒದಗಿಸುವಂತೆ ಆಗ್ರಹಿಸಿ ಕರವೇ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಸ್.ಸೋಂಪುರ ಮತ್ತು ಗದಗ ಜಿಲ್ಲಾ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಎಚ್. ಅಬ್ಬಿಗೇರಿ ಪಂಜಾಬ್ ನ್ಯಾಷನಲ್‌ ಬ್ಯಾಂಕ್‍ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು
ಬ್ಯಾಂಕ್‌ಗಳಲ್ಲಿ ಕನ್ನಡದಲ್ಲೇ ಸೇವೆ ಒದಗಿಸುವಂತೆ ಆಗ್ರಹಿಸಿ ಕರವೇ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಸ್.ಸೋಂಪುರ ಮತ್ತು ಗದಗ ಜಿಲ್ಲಾ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಎಚ್. ಅಬ್ಬಿಗೇರಿ ಪಂಜಾಬ್ ನ್ಯಾಷನಲ್‌ ಬ್ಯಾಂಕ್‍ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು   

ಗದಗ: ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾ ಘಟಕದ ಕಾರ್ಯಕರ್ತರು ‘ಹಿಂದಿ ದಿವಸ್‌’ ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ವಿವಿಧ ಬ್ಯಾಂಕ್‌ಗಳ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಘೋಷಣೆ ಕೂಗಿದರು. ಬ್ಯಾಂಕ್‌ಗಳಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯ ತಪ್ಪಿಸಿ, ಎಲ್ಲ ರೀತಿಯ ಸೇವೆಗಳನ್ನೂ ಕನ್ನಡದಲ್ಲೇ ಒದಗಿಸುವಂತೆ ಆಗ್ರಹಿಸಿದರು.

‘ಕೇಂದ್ರ ಸರ್ಕಾರ ಪ್ರತಿವರ್ಷ ಸೆ. 14ರಂದು ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ್‌ ಆಚರಣೆ ಮಾಡುತ್ತ ಬಂದಿದೆ. ಕೇವಲ ಹಿಂದಿ ದಿವಸ ಆಚರಿಸುವ ಮೂಲಕ ದೇಶದ ಎಲ್ಲ ಭಾಷೆಗಳನ್ನು ಕಡೆಗಣಿಸಿ, ಹಿಂದಿಯೊಂದನ್ನೇ ಮೆರೆಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಈ ವಿಚಾರವಾಗಿ ಕರವೇ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತ ಬರುತ್ತಿದೆ. ಅದರಂತೆ ಈ ವರ್ಷ ಕೂಡ ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿಯಲ್ಲಿರುವ ಎಲ್ಲ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್‍ಗಳ ಮುಂಭಾಗ ಪ್ರತಿಭಟನೆ ನಡೆಸಲಾಗಿದೆ’ ಎಂದು ಪ್ರತಿಭಟನಕಾರರು ತಿಳಿಸಿದರು.

ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಸೇವೆ ಒದಗಿಸದಿರುವುದು, ಹಿಂದಿ ಭಾಷೆಯಲ್ಲಿ ಮಾತನಾಡುವಂತೆ ಗ್ರಾಹಕರನ್ನು ಒತ್ತಾಯಿಸುವ ಅನೇಕ ಪ್ರಕರಣಗಳು ಇತ್ತೀಚಿನ ದಿನದಲ್ಲಿ ನಡೆದಿವೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಹೆಚ್ಚಿದೆ. ಗ್ರಾಹಕರ ಮೇಲೆ ಆಗುತ್ತಿರುವ ಹಿಂದಿ ಹೇರಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಮೇಟಿ, ಜಿಲ್ಲಾ ಉಪಾಧ್ಯಕ್ಷ ಶರಣಪ್ಪ ಪುರ್ತಗೇರಿ, ಶೇಖಅಲಿ ಕಲೆಗಾರ, ಆಶಾ ಜೂಲಗುಡ್ಡ, ಮೈಲಾರಪ್ಪ ಕರಿ, ಅಜಮ್ ಖಾಜಿ, ಕಾಶೀಂಸಾಬ ರೋಣದ, ಲತೀಫ ಶಿರಹಟ್ಟಿ, ಮೆಹಬೂಬಸಾಬ ತಹಶೀಲ್ದಾರ, ಇರ್ಫಾನ್ ತಾಳಿಕೋಟಿ, ಪ್ರಶಾಂತ ನವಲಗುಂದ, ಕಾಳೆ, ತುಳಸಪ್ಪ ಹಾತಲಗೇರಿ, ಸದ್ದಾಂ ಹಾಗೂ ಕರವೇ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.