ಗದಗ: ರಾಜ್ಯದ ಎಲ್ಲ ಶಾಲೆಗಳಿಗೆ ಸರ್ಕಾರ ದಸರಾ ರಜೆ ನೀಡಿದ್ದರೂ ಈ ಅವಧಿಯಲ್ಲಿ ವಿಶೇಷ ತರಗತಿ, ಪರೀಕ್ಷೆ ನಡೆಸುತ್ತಿದ್ದ ನಗರದ ಲೊಯೊಲಾ ಶಾಲೆ, ಸೇಂಟ್ ಜಾನ್ಸ್ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಶ್ರೀರಾಮ ಸೇನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಶಾಲೆಗಳಿಗೆ ಮುತ್ತಿಗೆ ಹಾಕಿದ ಶ್ರೀರಾಮ ಸೇನೆ ಕಾರ್ಯಕರ್ತರು ಆಡಳಿತ ಮಂಡಳಿಯವರ ಜತೆಗೆ ವಾಗ್ವಾದ ನಡೆಸಿದರು. ಶಾಲೆಯ ಆಡಳಿತ ಮಂಡಳಿಗಳ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಕರೆಯಿಸುವಂತೆ ಪಟ್ಟುಹಿಡಿದರು.
ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಶೆಟ್ಟೆಪ್ಪನವರ ಅವರು ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಸಮಾಧಾನಪಡಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಮಹೇಶ ರೋಖಡೆ ಮಾತನಾಡಿ, ‘ಸರ್ಕಾರ ರಾಜ್ಯದಲ್ಲಿನ ಎಲ್ಲ ಶಾಲಾ ಕಾಲೇಜುಗಳಿಗೆ ಸೆ.20ರಿಂದ ಅ.7ರ ವರೆಗೆ ರಜೆ ಘೋಷಿಸಿದೆ. ಆದರೆ, ಕ್ರಿಶ್ಚಿಯನ್ ಶಾಲೆಗಳು ಕ್ರಿಸ್‌ಮಸ್ ಅವಧಿಯಲ್ಲಿ ನೀಡುವ ರಜೆಯನ್ನು ಹೊಂದಿಸುವ ಸಲುವಾಗಿ ಈಗ ವಿಶೇಷ ತರಗತಿ, ಪರೀಕ್ಷೆಗಳನ್ನು ನಡೆಸುತ್ತಿವೆ. ಇದು ಹಿಂದೂಗಳ ಧಾರ್ಮಿಕ ಭಾವನೆಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ’ ಎಂದು ಆರೋಪಿಸಿದರು.
ಶ್ರೀರಾಮ ಸೇನೆಯ ಕಾರ್ಯಕರ್ತರಾದ ಸತೀಶ ಕುಂಬಾರ, ಅಶೋಕ ಭಜಂತ್ರಿ, ಸಂಜು ಚಟ್ಟಿ, ಮಹೇಶ ಹೊಸೂರು, ಭರತ್ ಲದ್ದಿ, ಕೃಷ್ಣ ಚುರ್ಚಪ್ಪನವರ, ಮಂಜುನಾಥ ಗುಡಿಮನಿ, ಹುಲಿಗೆಪ್ಪ ವಾಲ್ಮೀಕಿ, ಅನೀಲ ಮುಳ್ಳಾಳ, ಈರಪ್ಪ ಹೆಬಸೂರ, ಶಿವು ದಂಡಿನ, ಈರಪ್ಪ ವಾಲ್ಮೀಕಿ, ಶರಣಪ್ಪ ಲಕ್ಕುಂಡಿ, ವಿನಾಯಕ ಬೆಟಗೇರಿ, ಬಸವರಾಜ ಹುಲಕೋಟಿ, ದಲಿತ ಮಿತ್ರ ಮೇಳದ ಅಧ್ಯಕ್ಷ ಕುಮಾರ ನಡಗೇರಿ, ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ, ರಾಮು ಗೌಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.