ADVERTISEMENT

ಹಣೆಗೆ ನಾಮ ಹಾಕಿಕೊಂಡು ಪ್ರತಿಭಟನೆ

ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಶೂನ್ಯ ಕೊಡುಗೆ– ಜೆಡಿಎಸ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 4:55 IST
Last Updated 1 ಮಾರ್ಚ್ 2023, 4:55 IST
ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಏನನ್ನೂ ಕೊಟ್ಟಿಲ್ಲ ಎಂದು ಆರೋಪಿಸಿ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಹಣೆಗೆ ನಾಮ ಬಳಿದುಕೊಂಡು ಮಂಗಳವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಏನನ್ನೂ ಕೊಟ್ಟಿಲ್ಲ ಎಂದು ಆರೋಪಿಸಿ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಹಣೆಗೆ ನಾಮ ಬಳಿದುಕೊಂಡು ಮಂಗಳವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು   

ಗದಗ: ಬಿಜೆಪಿ ಸರ್ಕಾರ ಜಿಲ್ಲೆಯ ಜನರ ನಿರೀಕ್ಷೆಗಳನ್ನು ಹುಸಿ ಮಾಡಿ, ನಾಮ ಎಳೆದಿದೆ ಎಂದು ಆರೋಪಿಸಿ, ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಹಣೆಗೆ ನಾಮ ಬಳಿದುಕೊಂಡು ಮಂಗಳವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಜೆಡಿಎಸ್‌ ಮುಖಂಡ ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ‘ಜಿಲ್ಲೆಯಾಗಿ 25 ವರ್ಷಗಳು ಕಳೆದರೂ, ಅತ್ಯಂತ ಹಿಂದುಳಿದಿದೆ. ಜಿಲ್ಲೆಯ ಪ್ರಗತಿಗೆ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸುತ್ತಾ ಬಂದರೂ ಯಾವುದೇ ಅನುದಾನ, ವಿಶೇಷ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಲಿಲ್ಲ’ ಎಂದು ಹರಿಹಾಯ್ದರು.

‘ಮೂರು ತಿಂಗಳ ಹಿಂದೆ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಲಕ್ಷ ಕೋಟಿಗೂ ಅಧಿಕ ಬಂಡವಾಳ ಹರಿದು ಬಂದಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ ರಾಜ್ಯ ಸರ್ಕಾರ, ಆ ಬಂಡವಾಳ ಎಲ್ಲಿ ಹೂಡಿಕೆ ಆಯಿತು ಎಂದು ಹೇಳಲೇ ಇಲ್ಲಾ. ಗದಗ ಅಭಿವೃದ್ಧಿಗೆ ಕೈಗಾರಿಕೆಗಳು ಬೇಕು. ಅದಕ್ಕಾಗಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಬೇಕು. ಆದರೆ, ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ನಯಾಪೈಸೆಯ ಯೋಜನೆಯನ್ನೂ ಕೊಡದೆ, ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ತೋರಿದೆ’ ಎಂದು ಕಿಡಿಕಾರಿದರು.

ADVERTISEMENT

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗದಗ ಕ್ಷೇತ್ರದ ಶಾಸಕರು ಮೌನ ವಹಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಗದಗ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಅಪ್ಪನವರ ಮಾತನಾಡಿ, ‘ಜಿಲ್ಲೆಯ ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡ ಎರಡೂ ಪಕ್ಷಗಳಿಗೆ ಮುಂದೆ ಆತಂಕ ಕಾದಿದೆ’ ಎಂದರು.

ಪಕ್ಷದ ಜಿಲ್ಲಾ ವಕ್ತಾರ ರಮೇಶ ಕಲಬುರಗಿ, ಯಲ್ಲಪ್ಪ ಜಿಡ್ಡಿ, ಪ್ರಭುರಾಜಗೌಡ ಪಾಟೀಲ, ಪ್ರಫುಲ್‌ ಪುಣೇಕರ, ಅವಿನಾಶ ಗೋಕಾವಿ, ಸುಪ್ರಿತಾ ಬಾಗಲಕೋಟೆ, ಲಕ್ಷ್ಮಣ ಗಾಗಡೆ, ಅಬ್ದುಲ್‌ ನರಸಾಪುರ, ರಫೀಕ್‌ ನರಗುಂದ, ಮೆಹಬೂಬಸಾಬ ಅಥಣಿ, ಆಸಿಫ್‌ ಮಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.