ADVERTISEMENT

ಮುಳಗುಂದ: ರೈತರ ಮೊಗದಲ್ಲಿ ಮಂದಹಾಸ ತಂದ ಮಳೆ

​ಪ್ರಜಾವಾಣಿ ವಾರ್ತೆ
Published 24 ಮೇ 2025, 14:44 IST
Last Updated 24 ಮೇ 2025, 14:44 IST
ಮುಳಗುಂದ ಪಟ್ಟಣ ವ್ಯಾಪ್ತಿಯಲ್ಲಿ ದಿನವಿಡೀ ಸುರಿದ ಮಳೆಯಲ್ಲೇ ಜನರು ಸಂಚರಿಸಿದರು
ಮುಳಗುಂದ ಪಟ್ಟಣ ವ್ಯಾಪ್ತಿಯಲ್ಲಿ ದಿನವಿಡೀ ಸುರಿದ ಮಳೆಯಲ್ಲೇ ಜನರು ಸಂಚರಿಸಿದರು   

ಮುಳಗುಂದ: ಕಳೆದೆರಡು ದಿನಗಳಿಂದ ಮುಂಗಾರು ಪೂರ್ವದಲ್ಲೇ ಉತ್ತಮ ಮಳೆ ಆಗುತ್ತಿದ್ದು ಶನಿವಾರ ದಿನ ಪೂರ್ತಿ ಮಳೆ ಮುಂದುವರೆಯಿತು. ಮಳೆ ನೀರಿಕ್ಷೆಯಲ್ಲಿದ್ದ ರೈತರಿಗೆ ಹೊಸ ಭರವಸೆ ಮೂಡಿಸಿದೆ.

ಈಗಾಗಲೇ ಮುಂಗಾರು  ಬಿತ್ತನೆಗೆ ಹೊಲಗಳನ್ನು ರಂಟಿ ಹೊಡೆದು, ಹರಗಿ ಹದಗೊಳಿಸಿ ಬೀಜ ಬಿತ್ತನೆಗೆ ಸಿದ್ಧತೆ ನಡೆಸಿದ್ದ ರೈತರಿಗೆ ಸತತ ಮಳೆ ಜೀವ ಕಳೆಯನ್ನು ತುಂಬಿದೆ.

ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆ ಪ್ರಾರಂಭದಲ್ಲಿಯೇ ಉತ್ತಮವಾಗಿ ಸುರಿದಿದ್ದು, ಕೃಷಿ ಭೂಮಿ ಆಳವಾಗಿ ತೇವವಾಗುತ್ತಿರುವುದರಿಂದ ರೈತರ ಸಂತಸವನ್ನು ಇಮ್ಮಡಿಗೊಳಿಸಿದೆ.

ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಆದರೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಸಿಗದೆ ರೈತರು ಪರದಾಡುವುದು ಮಾತ್ರ ತಪ್ಪುವುದಿಲ್ಲ ಎನ್ನುತ್ತಾರೆ ರೈತರು.

ಕಾಳ ಸಂತೆಯಲ್ಲಿ ಮಾರಟ ಮಾಡುವವರು ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಬೀಜ, ಗೊಬ್ಬರ ಮಾರಾಟ ಮಾಡಿ, ರೈತರನ್ನ ಸುಲಿಗೆ ಮಾಡುತ್ತಾರೆ. ಇಂತವರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈ ಗೊಳ್ಳಬೇಕು. ಸ್ಥಳೀಯವಾಗಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಕಾಲದಲ್ಲಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡ ಮಹಾಂತೇಶ ಎಸ್.ಕಣವಿ ಆಗ್ರಹಿಸಿದರು.

ರಿಯಾಯಿತಿ ದರದಲ್ಲಿ ಬೀಜ ವಿತರಣೆ ಪ್ರಾರಂಭ

‘ಪ್ರಸ್ತುತ ಹೆಸರು ತೊಗರಿ ಬೀಜ ಸಂಗ್ರಹ ನಡೆದಿದೆ. ಇನ್ನೆರಡು ದಿನಗಳಲ್ಲಿ ಗೋವಿನ ಜೋಳ ದಾಸ್ತಾನಾಗುತ್ತದೆ. ಬಿತ್ತನೆ ಬೀಜ ಕೊರೆತೆ ಸಮಸ್ಯೆಯಿಲ್ಲ ಸೋಮವಾರದೊಳಗೆ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಮಾಡಲು ಪ್ರಾರಂಭಿಸಲಾಗುವುದು’ ಎಂದು ಗದಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT