ADVERTISEMENT

ಅಂತೂರ ಕೆರೆ ಭರ್ತಿ, ಮನೆಯೊಳಗೆ ನೀರಿನ ಸೆಲೆ

ನೆರವಿಗೆ ಬಾರದ ಅಧಿಕಾರಿಗಳ ವಿರುದ್ದ ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 7:28 IST
Last Updated 8 ಸೆಪ್ಟೆಂಬರ್ 2022, 7:28 IST
ಮುಳಗುಂದ ಸಮೀಪದ ಅಂತೂರ ಬೆಂತೂರ ಕೆರೆ ತುಂಬಿದ ಪರಿಣಾಮ ಮನೆಯೊಳಗೆ ಉಕ್ಕುತ್ತಿರುವ ನೀರು ಹೊರ ಹಾಕುತ್ತಿರುವುದು
ಮುಳಗುಂದ ಸಮೀಪದ ಅಂತೂರ ಬೆಂತೂರ ಕೆರೆ ತುಂಬಿದ ಪರಿಣಾಮ ಮನೆಯೊಳಗೆ ಉಕ್ಕುತ್ತಿರುವ ನೀರು ಹೊರ ಹಾಕುತ್ತಿರುವುದು   

ಅಂತೂರ ಬೆಂತೂರ (ಮುಳಗುಂದ ): ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಗ್ರಾಮದ ಕೆರೆ ಭರ್ತಿಯಾಗಿದ್ದು, ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ನೀರಿನ ಸೆಲೆ (ಅಂತರ್ಜಲ) ಹರಿಯುತ್ತಿದೆ. ಇದರಿಂದ ನಿವಾಸಿಗಳು ಹೈರಾಣಾಗಿದ್ದು ಮನೆಗೆ ಹಾನಿಯಾಗುವ ಆತಂಕ ಅವರನ್ನು ಕಾಡುತ್ತಿದೆ.

ನಾಲ್ಕು ವರ್ಷಗಳ ಹಿಂದೆ ಕೆರೆ ಅಭಿವೃದ್ಧಿ ನೆಪದಲ್ಲಿ ಅಳತೆ ಮೀರಿ ಅವೈಜ್ಞಾನಿಕವಾಗಿ ಕೆರೆ ಅಂಗಳವನ್ನ ಆಳವಾಗಿ ತೆಗೆದಿರುವುದೇ ಮನೆಯೊಳಗೆ ಸೆಲೆ ಹುಟ್ಟಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ ನೀರಿನಿಂದ ಕೆರೆ ಭರ್ತಿಯಾಗುತ್ತಿದ್ದಂತೆ ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ನೀರು ಹರಿಯುತ್ತಿದೆ. ನೀರು ಹೊರ ಹಾಕಲು ಹಗಲು ರಾತ್ರಿ ಹರಸಾಹಸ ಪಡುತ್ತಿರುವ ನಿವಾಸಿಗಳು, ಕಾಮಗಾರಿ ನಡೆಸಿದ ಗ್ರಾಮ ಪಂಚಾಯ್ತಿಗೂ ಹಿಡಿಶಾಪ ಹಾಕುತ್ತಿದ್ದಾರೆ.

ADVERTISEMENT

ಈ ಭಾಗದ ಮಣ್ಣಿನ ಮನೆಗಳು ಅಡಿಪಾಯದಲ್ಲಿ ನೀರು ಜಿನುಗಿ, ಗೋಡೆಗಳು ಧರೆಗೆ ಉರುಳಿದ್ದು, ಹಲವು ಮನೆಗಳ ಗೋಡೆ ಬೀಳುವ ಹಂತದಲ್ಲಿವೆ. ದನಕರುಗಳ ಕೊಟ್ಟಿಗೆಯಲ್ಲಿ ಸೆಲೆಯಿಂದ ನೀರು ತುಂಬಿದ್ದು ರೈತರು ಜಾನುವಾರುಗಳ ರಕ್ಷಣೆ ಹೇಗೆ ಎನ್ನುವ ಚಿಂತೆ ಕಾಡುತ್ತಿದೆ. ಪಡಸಾಲೆ ಸೇರಿದಂತೆ ಮಲಗುವ ಕೋಣೆ, ಅಡುಗೆ ಮನೆ, ದೇವರ ಕೋಣೆಗೂ ನೀರಿನ ಬುಗ್ಗೆಗಳು ಏಳುತ್ತಿವೆ. ಇದರಿಂದಾಗಿ ಕೆಲವರು ಮನೆಯನ್ನೇ ತೊರೆದಿದ್ದಾರೆ.

‘ಹಲವು ದಶಕಗಳಿಂದ ಇಲ್ಲೇ ವಾಸವಾಗಿದ್ದೇವೆ. ಆದರೆ, ಎಂದೂ ಈ ಸಮಸ್ಯೆ ಬಂದಿಲ್ಲ. ಕೆರೆ ಹೂಳೆತ್ತಿದ ನಂತರ ಕೆರೆ ತುಂಬಿ ಸೆಲೆ ಹರಿಯುತ್ತಿದೆ. 2020ರಲ್ಲಿ ಇದೇ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆಗ ಗ್ರಾಮ ಪಂಚಾಯ್ತಿಯವರು ಕೆರೆ ಕೋಡಿ ಹರಿಯಲು ವ್ಯವಸ್ಥೆ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಕೆಲಸ ಪೂರ್ಣ ಆಗಿಲ್ಲ. ಹೀಗಾಗಿ ಮತ್ತೇ ಸಂಕಷ್ಟ ಎದುರಾಗಿದೆ. ನಾವು ಇಷ್ಟೆಲ್ಲಾ ಕಷ್ಟ ಪಡುತ್ತಿದ್ದರೂ ಈವರೆಗೆ ಯಾವ ಅಧಿಕಾರಿಗಳು ಕೂಡ ನಮ್ಮ ನೆರವಿಗೆ ಬಂದಿಲ್ಲ. ಈ ಸಮಸ್ಯೆಗೆ ಅವರ ನಿರ್ಲಕ್ಷ್ಯವೇ ಕಾರಣ’ ಎಂದು ಶರಣು ಬಂಕದ, ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದರು.

ನೀಲಗುಂದ ಭಾಗ ಸೇರಿದಂತೆ ಸಾವಿರಾರು ಎಕರೆ ಭೂ ಪ್ರದೇಶದ ನೀರು ಕೆರೆಗೆ ಹರಿದು ಬರುತ್ತದೆ. ನೀರು ಹೊರ ಹಾಕುವ ಸಲುವಾಗಿ ನಾಲ್ಕು ಮೋಟಾರ್‌ ಅಳವಡಿಸಿದ್ದು, ನಾಲ್ಕು ದಿನಗಳಿಂದ 1 ಅಡಿ ನೀರು ಕೂಡ ಕಡಿಮೆ ಆಗಿಲ್ಲ. ನೀರಿನ ಹರಿವು ಇನ್ನೂ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರಿದರೆ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಲಿದೆ. ಅಧಿಕಾರಿಗಳು ಕೂಡಲೇ ಕೆರೆ ನೀರು ಹೊರ ಹಾಕಲು ವ್ಯವಸ್ಥೆ ಮಾಡಬೇಕು’ ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಕೆರೆ ನೀರಿನ ಕೋಡಿ ಹರಿಯಲು ಅಮೃತ ಕೆರೆ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ. ಪೈಪ್ ಜೋಡಣೆ ಮಾಡುವಷ್ಟರಲ್ಲಿ ಮಳೆ ಸುರಿದು ಕೆರೆ ತುಂಬಿದ್ದರಿಂದ ಕೆಲಸ ಸ್ಥಗಿತವಾಗಿದೆ. ನೀರು ಹೊರ ಹಾಕಲು ಯಂತ್ರಗಳನ್ನ ಅಳವಡಿಸಿದ್ದೇವೆ
ಎಸ್.ಎಚ್.ಚಟ್ರಿ, ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.