ಗದಗ:‘ಯುವಜನರು ಧೂಮಪಾನ, ಗಾಂಜಾ ಸೇದುವುದು, ಮದ್ಯಪಾನ ಸೇರಿದಂತೆ ಮುಂತಾದ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ವ್ಯಸನವು ಶಾರೀರಿಕ, ಮಾನಸಿಕ, ಸಾಮಾಜಿಕವಾಗಿ ತೊಂದರೆ ಉಂಟು ಮಾಡುತ್ತದೆ’ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಜೇಶ್ವರಾ ಎಸ್. ಶೆಟ್ಟಿ ಹೇಳಿದರು.
ನಗರದ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಬಕಾರಿ ಇಲಾಖೆ ಹಾಗೂ ಕಾಲೇಜಿನ ಅಗದತಂತ್ರ ವಿಭಾಗ ಮತ್ತು ಎನ್‌ಎಸ್‌ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಮಾದಕ ವಸ್ತುಗಳ ನಿಷೇಧ ಕುರಿತಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮನರಂಜನೆಗಾಗಿ ಹುಟ್ಟುವ ಮಾದಕ ವಸ್ತುಗಳ ಬಳಕೆ, ಕೊನೆಗೆ ಚಟವಾಗಿ ಪರಿವರ್ತನೆ ಆಗುತ್ತದೆ. ಹಾಗಾಗಿ, ಯುವಜನರು ದುಶ್ಚಟಗಳಿಂದ ದೂರ ಇರಬೇಕು’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಎಸ್.ಕೆ.ಹಿರೇಮಠ ಮಾತನಾಡಿ, ‘ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು. ಅವು ಜೀವನ ನಾಶ ಮಾಡುತ್ತವೆ’ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ , ಸಂಪನ್ಮೂಲ ವ್ಯಕ್ತಿಗಳಾದ ಅಬಕಾರಿ ಉಪ ಅಧೀಕ್ಷಕ ಆತ್ಮಲಿಂಗಯ್ಯ ಮಠಪತಿ, ರೋಣ ಆಯುರ್ವೇದ ಮಹಾವಿದ್ಯಾಲಯದ ಡಾ. ಪ್ರವೀಣ್ ಪಲ್ಲೇದ ಅವರು, ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟರು.
ಅಗದ ತಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಜಯಲಕ್ಷೀ ಮೆಣಸಗಿ ಸ್ವಾಗತಿಸಿದರು. ಡಾ. ಬೂದೇಶ ಕನಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂಮಿಕಾ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ಅಶ್ವಿನಿ ಮಾಲಿಪಾಟೀಲ ನಿರೂಪಣೆ ಮಾಡಿದರು. ಡಾ. ಟಿ.ವಿದ್ಯಾವತಿ ವಂದಿಸಿದರು.
ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮತ್ತು ಅಬಕಾರಿ ಇಲಾಖೆಗಳ ಸಿಬ್ಬಂದಿ ವರ್ಗದವರು ಕಾಲೇಜಿನ ಅಧ್ಯಾಪಕ ವೃಂದದವರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.