ಲಕ್ಷ್ಮೇಶ್ವರ: ಹೋಳಿ ಹಬ್ಬದ ಅಂಗವಾಗಿ ಶುಕ್ರವಾರ ಪಟ್ಟಣದಲ್ಲಿ ಜರುಗಿದ ರಂಗಪಂಚಮಿ ಬಣ್ಣದಾಟದಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಯುವತಿಯರು ಬಣ್ಣದಲ್ಲಿ ಮಿಂದೆದ್ದರು. ಬೆಳಿಗ್ಗೆಯಿಂದಲೇ ಮಕ್ಕಳು ಪರಸ್ಪರ ಬಣ್ಣ ಎರಚಿ ರಂಗಪಂಚಮಿಗೆ ಮುನ್ನುಡಿ ಬರೆದರು.
ಗಮನ ಸೆಳೆದ ರೇನ್ ಡಾನ್ಸ್: ಇದೇ ಮೊದಲ ಬಾರಿಗೆ ಪಟ್ಟಣದ ಹಿಂದೂ ಮಹಾಸಭಾ ಗಣಪತಿ ಸೇವಾ ಮಂಡಳಿ ಮತ್ತು ಹಾವಳಿ ಹನುಮಪ್ಪನ ದೇವಸ್ಥಾನ ಕಮಿಟಿ ಆಶ್ರಯದಲ್ಲಿ ಹನುಮಂತ ದೇವರ ದೇವಸ್ಥಾನದ ಎದುರು ಮತ್ತು ಸೊಪ್ಪಿನಕೇರಿ ಯುವಕರು ತರಕಾರಿ ಮಾರುಕಟ್ಟೆಯಲ್ಲಿ ರೇನ್‍ಡಾನ್ಸ್ ಆಯೋಜಿಸಿದ್ದು ಗಮನ ಸೆಳೆಯಿತು. ಡಿಜೆ ಸೌಂಡ್‍ಗೆ ತಕ್ಕಂತೆ ಕಾರಂಜಿಯಿಂದ ಮಳೆ ಬರುವ ರೀತಿಯಲ್ಲಿ ನೀರನ್ನು ಚಿಮುಕಿಸಲಾಗುತ್ತಿತ್ತು. ಯುವಕರು ಮತ್ತು ಮಕ್ಕಳು ಈ ರೇನ್ ಡ್ಯಾನ್ಸ್‌ಗೆ ಸಕತ್ ಹೆಜ್ಜೆ ಕುಣಿದು ಕುಪ್ಪಳಿಸಿದರು.
ಅದ್ದೂರಿ ಮೆರವಣಿಗೆ: ಹಳ್ಳದಕೇರಿ ಪಾಣಿಗಟ್ಟಿ ಓಣಿಯ ಯುವಕರು ಕಾಮ-ರತಿಯರ ಮೆರವಣಿಗೆಯನ್ನು ಸಂಘಟಿಸಿದ್ದರು. ಶಾಸಕ ಡಾ.ಚಂದ್ರು ಲಮಾಣಿ ಮೆರವಣಿಗೆಗೆ ಚಾಲನೆ ನೀಡಿರಲ್ಲದೆ ಯುವಕರೊಂದಿಗೆ ಬಣ್ಣದಾಟ ಆಡಿ ಹುರುಪು ತುಂಬಿದರು. ಶಿರಹಟ್ಟಿ ಮಂಡಲದ ಬಿಜೆಪಿ ಘಟಕದ ಅಧ್ಯಕ್ಷ ಸುನಿಲ ಮಹಾಂತಶೆಟ್ಟರ ಮತ್ತಿತರರು ಪರಸ್ಪರ ಬಣ್ಣ ಹಚ್ಚಿ ಹಬ್ಬಕ್ಕೆ ಮೆರಗು ತಂದರು.
ಗಮನ ಸೆಳೆದ ಗೋಸಾಯಿ ಜನಾಂಗದ ಡಾನ್ಸ್: ಇಲ್ಲಿನ ವೀರಭದ್ರ ದೇವಸ್ಥಾನದ ಹತ್ತಿರ ಗೋಸಾಯಿ ಜನಾಂಗದ ಮಕ್ಕಳು, ಮಹಿಳೆಯರು, ಯುವಕರು, ಯುವತಿಯರು, ಪುರುಷರು ಎಲ್ಲರೂ ಸೇರಿ ರಂಗ ಪಂಚಮಿ ಆಚರಿಸಿದ್ದು ವಿಶೇಷವಾಗಿತ್ತು. ಮಾರವಾಡಿ ಜನಾಂಗದ ಮಹಿಳೆಯರು ಪಟ್ಟಣದ ಬೇರೆ ಬೇರೆ ಓಣಿಗಳಲ್ಲಿ ಇರುವ ತಮ್ಮ ಜನಾಂಗದವರ ಮನೆಗೆ ತೆರಳಿ ಬಣ್ಣ ಎರಚಿ ರಂಗಪಂಚಮಿ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.