ಮುಂಡರಗಿ: ‘ಪುರಸಭೆಯು ಪ್ರಕಟಿಸಿರುವ ಆಶ್ರಯ ಮನೆ ಫಲಾನುಭವಿಗಳ ಪಟ್ಟಿ ಅವೈಜ್ಞಾನಿಕವಾಗಿದ್ದು, ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ನೇತೃತ್ವದಲ್ಲಿ ಮಂಗಳವಾರ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ‘ಪುರಸಭೆಯು ಆಯ್ಕೆ ಮಾಡಿರುವ ಫಲಾನುಭವಿಗಳ ಪಟ್ಟಿಯು ಹಲವಾರು ಲೋಪ, ದೋಷಗಳಿಂದ ಕೂಡಿದೆ. ಪಟ್ಟಿಯಲ್ಲಿ ಅನರ್ಹ ಫಲಾನುಭವಿಗಳೇ ಹೆಚ್ಚಾಗಿದ್ದು, ಬಡವರಿಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿದರು.
‘ಶಾಸಕ ಚಂದ್ರು ಲಮಾಣಿ ಅವರ ಅಧ್ಯಕ್ಷತೆಯಲ್ಲಿ ಸಿದ್ಧಪಡಿಸಿರುವ 190 ಫಲಾನುಭವಿಗಳ ಪಟ್ಟಿಯು ತಾರತಮ್ಯದಿಂದ ಕೂಡಿದೆ. 2023ರಲ್ಲಿ ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕರು ತಯಾರಿಸಿದ್ದ 994 ಫಲಾನುಭವಿಗಳ ಪಟ್ಟಿಯನ್ನು ರದ್ದು ಪಡಿಸಿದ ಸರ್ಕಾರ ಪುನಃ ಅರ್ಜಿ ಕರೆದು ಪಲಾನುಭವಿಗಳನ್ನು ಆಯ್ಕೆ ಮಾಡುವಂತೆ ಸೂಚಿಸಿದ್ದರು. ಅಧಿಕಾರಿಗಳು ಸರ್ಕಾರದ ಆದೇಶವನ್ನು ಮೀರಿ ತಮಗೆ ಬೇಕಾದವರಿಗೆ ಆಶ್ರಯ ಮನೆ ವಿತರಿಸಲು ಮುಂದಾಗಿದ್ದಾರೆ’ ಎಂದು ದೂರಿದರು.
‘ಫಲಾನುಭವಿಗಳ ಪಟ್ಟಿಯನ್ನು ತಕ್ಷಣ ರದ್ದುಗೊಳಿಸಬೇಕು. ಇಲ್ಲವಾದ್ದಲ್ಲಿ ಏ.22ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮಾತನಾಡಿ, 'ಅನರ್ಹರಿಗೆ ಮನೆಗಳನ್ನು ವಿತರಿಸಿರುವ ಕುರಿತಂತೆ ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದಲ್ಲಿ, ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಸ್ಥಾಯಿ ಸಮಿತಿ ಅಧ್ಯಕ್ಷ ರಫಿಕ್ ಮುಲ್ಲಾ, ಸದಸ್ಯರಾದ ಶಿವಣ್ಣ ಚಿಕ್ಕಣ್ಣವರ ಅವರು ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು. ಮುಖಂಡರಾದ ಅಡಿವೆಪ್ಪ ಚಲವಾದಿ, ದ್ರುವಕುಮಾರ ಹೂಗಾರ, ರಿಯಾಜ ಹೊಸಪೇಟೆ, ಶರೀಫ ಮೇವುಂಡಿ, ಮೈನುದ್ದಿನ ಗರಡಿಮನಿ, ರವಿಗೌಡ ಪಾಟೀಲ, ಸಂತೋಷ ಗಡಾದ, ಜಗದೀಶ ಕಂಚಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.