ADVERTISEMENT

ಚಿಂಚಲಿ– ಕೋಳಿವಾಡ ರಸ್ತೆ ಗುಂಡಿ ಮುಚ್ಚಿಸಿ: ಆಗ್ರಹ

ಹುಬ್ಬಳ್ಳಿಗೆ ಪ್ರಯಾಣಿಸುವ ಪ್ರಯಾಣಿಕರು ಹೈರಾಣು: ನಿತ್ಯವೂ ತಪ್ಪದ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 6:18 IST
Last Updated 5 ಡಿಸೆಂಬರ್ 2025, 6:18 IST
ಮುಳಗುಂದ ಸಮೀಪದ ಚಿಂಚಲಿ-ಕೋಳಿವಾಡ ನಡುವಿನ ಹುಬ್ಬಳ್ಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿರುವುದು
ಮುಳಗುಂದ ಸಮೀಪದ ಚಿಂಚಲಿ-ಕೋಳಿವಾಡ ನಡುವಿನ ಹುಬ್ಬಳ್ಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿರುವುದು   

ಮುಳಗುಂದ: ಇಲ್ಲಿಗೆ ಸಮೀಪದ ಚಿಂಚಲಿ-ಕೋಳಿವಾಡ ನಡುವಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನಗಳ ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ. ಗುಂಡಿ ಬಿದ್ದಿರುವ ರಸ್ತೆಯಲ್ಲಿ ನಿತ್ಯ ಹುಬ್ಬಳ್ಳಿಗೆ ಪ್ರಯಾಣಿಸುವ ವಾಹನ ಸವಾರರು ಮತ್ತು ಪ್ರಯಾಣಿಕರ ಗೋಳು ಹೇಳತೀರದಾಗಿದೆ.

ಚಿಂಚಲಿ ಗ್ರಾಮದಿಂದ ಕೋಳಿವಾಡದವರೆಗೆ ಸುಮಾರು 15 ಕಿ.ಮೀ. ರಸ್ತೆಯನ್ನು ದಶಕದ ಹಿಂದೆ ದುರಸ್ತಿ ಮಾಡಲಾಗಿತ್ತು. ಈಗ ಅದು ಸಂಪೂರ್ಣ ಹಾಳಾಗಿದೆ. ಗದಗ ಉಪವಿಭಾಗದ ಸರಹದ್ದಿನಿಂದ ರಸ್ತೆ ಉದ್ದಕ್ಕೂ ಲೆಕ್ಕವಿಲ್ಲದಷ್ಟು ಗುಂಡಿಗಳು ಬಿದ್ದಿವೆ. ಈ ಹಿಂದೆ ಹಾಕಿದ್ದ ಡಾಂಬರು, ಕಡಿ ಕಿತ್ತು ಹೋಗಿದೆ. ಮಳೆಯಾದರೆ ರಸ್ತೆ ನಡುವೆ ದೊಡ್ಡ ಗುಂಡಿಗಳು ಸೃಷ್ಟಿಯಾಗಿ ಸಂಚಾರ ತೀವ್ರ ಕಷ್ಟವಾಗುತ್ತಿದೆ. ರಸ್ತೆ ಇಕ್ಕೆಲಗಳಲ್ಲಿ ದೊಡ್ಡ ಕಂದಕಗಳು ಬಿದ್ದಿದ್ದು, ಮೃತ್ಯುಕೂಪವಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶಿರಹಟ್ಟಿಯಿಂದ ಮುಳಗುಂದ, ಚಿಂಚಲಿ, ಕೋಳಿವಾಡ ಮಾರ್ಗವಾಗಿ ಹುಬ್ಬಳ್ಳಿ ತಲುಪುವ ಈ ರಸ್ತೆ ಚಿಂಚಲಿಯಿಂದ ಕೋಳಿವಾಡವರೆಗೆ ಸಂಪೂರ್ಣ ಹದಗೆಟ್ಟಿದೆ. ಇದೇ ರಸ್ತೆಯಲ್ಲಿ ನಿತ್ಯ 50ಕ್ಕೂ ಹೆಚ್ಚು ಸಾರಿಗೆ ಬಸ್ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಪ್ರಯಾಣಿಕರನ್ನು ಹೊತ್ತು ಸಾಗುವ ಬಸ್‌ಗಳು ತಗ್ಗುದಿಣ್ಣೆಗಳ ಮೇಲೆ ಎದ್ದು ಬಿದ್ದು ಸಾಗುತ್ತಿವೆ. ಬೈಕ್ ಸವಾರಂತು ಆಯತಪ್ಪಿ ಬಿದ್ದು ಕೈಕಾಲು ಮುರಿದುಕೊಳ್ಳುವ ಘಟನೆಗಳು ಸಾಮಾನ್ಯವಾಗಿವೆ. ರೈತರ ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್ ಸಂಚಾರ ಕೂಡ ದುಸ್ತರವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಮುಳಗುಂದ-ಹುಬ್ಬಳ್ಳಿ ನಡುವಿನ 50 ಕಿ.ಮೀ ದೂರವನ್ನ 1 ತಾಸಿನಲ್ಲಿ ಕ್ರಮಿಸಬಹುದು. ಆದರೆ, ರಸ್ತೆ ಹಾಳಾಗಿರುವ ಕಾರಣ 2 ತಾಸು ಸಮಯ ವ್ಯಯಿಸಬೇಕಿದೆ. ಗದಗ, ಹುಬ್ಬಳ್ಳಿ ಹಾಗೂ ನವಲಗುಂದ ಹೀಗೆ ಮೂರು ತಾಲ್ಲೂಕುಗಳಿಗೆ ಸಂಬಂಧಿಸಿದ ರಸ್ತೆ ಇದಾಗಿದ್ದು. ಸಂಪೂರ್ಣ ರಸ್ತೆ ನಿರ್ಮಾಣ ಯಾವಾಗ ಎಂಬುದೇ ಯಕ್ಷಪ್ರಶ್ನೆಯಾಗಿದೆ. ನಿತ್ಯ ಸಂಚರಿಸುವ ವಾಹನ ಚಾಲಕರು, ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿರುವ ಈ ರಸ್ತೆಯನ್ನು ಕೂಡಲೇ ದುರಸ್ತಿ ಪಡಿಸುವಂತೆ ಮುಳಗುಂದ ಹಾಗೂ ಚಿಂಚಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಿಂಚಲಿ-ಕೋಳಿವಾಡ ನಡುವಿನ ಮುಖ್ಯ ರಸ್ತೆ ಮಧ್ಯೆ ಕಂದಕ ಬಿದ್ದಿರುವುದು
ದಶಕದಿಂದ ರಸ್ತೆ ಹದಗೆಟ್ಟಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ನಿರ್ಲಕ್ಷವಹಿಸಿದ್ದಾರೆ. ಇದೇ ರಸ್ತೆಯಲ್ಲಿ ಎಷ್ಟೋ ಜನ ಪ್ರಯಾಣಿಕರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ತಕ್ಷಣ ದುರಸ್ತಿ ಕೈಗೊಳ್ಳದೆ ಹೋದಲ್ಲಿ ಹೋರಾಟ ಆರಂಭಿಸಲಾಗುವುದು.
ಮಹಾಂತೇಶ ಎಸ್.ಕಣವಿ ಕರ್ನಾಟಕ ಜನಪರ ಅಭಿವೃದ್ದಿ ವೇದಿಕೆ ಗದಗ ಜಿಲ್ಲಾ ಕಾರ್ಯಾಧ್ಯಕ್ಷ
5 ವರ್ಷಗಳ ಹಿಂದೆ ಈ ರಸ್ತೆ ಕಾಮಗಾರಿ ಟೆಂಡರ್‌ ಆಗಿದ್ದು ಕಾಮಗಾರಿ ಪ್ರಾರಂಭಿಸಲು ಹೋದಾಗ ಅಕ್ಕ ಪಕ್ಕದ ರೈತರು ಅಡ್ಡಿ ಪಡಿಸಿ ಪರಿಹಾರ ಕೇಳಿ ನ್ಯಾಯಾಯದ ಮೆಟ್ಟಿಲೇರಿದ್ದರು. ಈಗ ಪ್ರಕರಣ ಅಂತ್ಯ ಕಂಡಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಕೈಗೊಳ್ಳುತ್ತೇವೆ.
–ಸುಧಾಕರ ಕಟ್ಟಿಮನಿ ಎಇಇ ಲೋಕೋಪಯೋಗಿ ಇಲಾಖೆ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.