ADVERTISEMENT

ರೋಣ‌ | ಮಾಯವಾದ ‘ಮೈಲು’ಗಲ್ಲು ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 4:24 IST
Last Updated 19 ಜುಲೈ 2025, 4:24 IST
ರೋಣ ತಾಲ್ಲೂಕಿನ ಯಾ.ಸ.ಹಡಗಲಿ ಗ್ರಾಮದ ರಸ್ತೆಯಲ್ಲಿರುವ ಊರಿನ ಹೆಸರು ಇಲ್ಲದ ಮೈಲುಗಲ್ಲು.
ರೋಣ ತಾಲ್ಲೂಕಿನ ಯಾ.ಸ.ಹಡಗಲಿ ಗ್ರಾಮದ ರಸ್ತೆಯಲ್ಲಿರುವ ಊರಿನ ಹೆಸರು ಇಲ್ಲದ ಮೈಲುಗಲ್ಲು.   

ರೋಣ: ತಾಲ್ಲೂಕಿನ ಹಲವು ಗ್ರಾಮಗಳಿಗೆ ತೆರಳುವ ರಸ್ತೆಗಳ ಪಕ್ಕದಲ್ಲಿರುವ ಮೈಲುಗಲ್ಲಿನ ಊರಿನ ಹೆಸರು ಹಾಗೂ ಕ್ರಮಿಸಬೇಕಾದ ದೂರದ ಕುರಿತು ಮಾಹಿತಿಗಳು ಸಂಪೂರ್ಣವಾಗಿ ನಶಿಸಿ ಹೋಗಿದ್ದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕು ಕೇಂದ್ರವಾದ ರೋಣದ ಸುತ್ತಲೂ ಹಲವು ಹಳ್ಳಿಗಳಿದ್ದು ಈ ಹಳ್ಳಿಗಳಿಗೆ ತೆರಳಲು ಸೂಕ್ತ ಮಾರ್ಗ ಸೂಚಿಸಬೇಕಾದ ಮೈಲುಗಲ್ಲುಗಳು ಕೆಲವೆಡೆ ಹಾಳಾಗಿದ್ದು ಇನ್ನು ಕೆಲವೆಡೆ ಊರಿನ ಹೆಸರುಗಳೇ ನಮೂದಾಗಿಲ್ಲ. ಇದು ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ.

ಈಗಾಗಲೇ ತಾಲ್ಲೂಕಿನ ಗ್ರಾಮೀಣ ರಸ್ತೆಗಳ ಬಗ್ಗೆ ಜನರಲ್ಲಿ ಬೇಸರವಿದ್ದು ಗ್ರಾಮೀಣ ಪ್ರದೇಶದ ಬಹುತೇಕ ರಸ್ತೆಗಳು ದುಸ್ಥಿತಿ ತಲುಪಿವೆ. ಹಲವೆಡೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಂಡು ಹಲವು ವರ್ಷಗಳೇ ಗತಿಸಿದರೂ ಕಾಮಗಾರಿಗಳು ಮಾತ್ರ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿದ್ದು ಲೋಕೋಪಯೋಗಿ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಜನರು ಅಸಮದಾನ ವ್ಯಕ್ತಪಡಿಸುವಂತಾಗಿದೆ. ರಸ್ತೆ ಹೇಗಾದರೂ ಇರಲಿ ಕನಿಷ್ಠ ಮೈಲುಗಲ್ಲನ್ನಾದರೂ ಇಲಾಖೆ ಸರಿಪಡಿಸದೇ ತನ್ನ ಎಂದಿನ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದೆ. ವಿಪರ್ಯಾಸವೆಂದರೆ ಗ್ರಾಮೀಣ ರಸ್ತೆಗಳ ಜೊತೆ ಜೊತೆಗೆ ರಾಜ್ಯ ಹೆದ್ದಾರಿಗಳಲ್ಲಿಯೂ ಸಹ ಈ ಸಮಸ್ಯೆ ಕಂಡು ಬಂದಿದ್ದು ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಜನಸಾಮಾನ್ಯರಲ್ಲಿ ತೀವ್ರ ಬೇಸರ ಉಂಟು ಮಾಡಿದೆ.

ADVERTISEMENT

ಪ್ರಯಾಣಿಕರ ದಿಕ್ಕು ತಪ್ಪಿಸುತ್ತಿರುವ ರಸ್ತೆಗಳು: ರೋಣ ತಾಲ್ಲೂಕಿನ ಕೆಲ ಭಾಗದ ಹಳ್ಳಿಗಳಿಗೆ ಮುಖ್ಯ ರಸ್ತೆಯಿಂದ ಗ್ರಾಮದ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪಕ್ಕದಲ್ಲಿರುವ ಮೈಲುಗಲ್ಲುಗಳಲ್ಲಿ ಊರಿನ ಹೆಸರು ಇಲ್ಲದೇ ಇರುವುದು ಹಾಗೂ ಸಮರ್ಪಕ ನಾಮಫಲಕ ಇಲ್ಲದಿರುವುದರಿಂದ ಬೇರೆ ಬೇರೆ ಕಡೆಗಳಿಂದ ಬರುವ ವಾಹನ ಸವಾರರ ದಿಕ್ಕು ತಪ್ಪುತ್ತಿದ್ದು ಸವಾರರು ಗೂಗಲ್ ಮ್ಯಾಪ್ ಬಳಸಿಕೊಂಡು ಊರು ತಲುಪಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಿ ಸಂಚರಿಸುವ ಪ್ರಯಾಣಿಕರ ಕಷ್ಟ ಹೇಳತೀರದ್ದಾಗಿದ್ದು ಯಾವ ರಸ್ತೆ ಯಾವ ಊರಿಗೆ ತೆರಳುತ್ತದೆ ಎಲ್ಲಿ ಹೋಗಬೇಕು ಎಂಬ ದಾರಿ ಸಿಗದೇ ತೊಂದರೆ ಅನುಭವಿಸುವಂತ ಸ್ಥಿತಿ ಪ್ರಯಾಣಿಕರದ್ದಾಗಿದೆ.

ಮುಳ್ಳು ಕಂಟಿಗಳಿಕದ ಮುಚ್ಚಿದ ರಸ್ತೆಗಳು: ಗ್ರಾಮೀಣ ಭಾಗದ ಹಲವು ರಸ್ತೆಗಳ ಪಕ್ಕದಲ್ಲಿ ಮುಳ್ಳು ಕಂಟಿಗಳು ಬೆಳೆದು ಭಾಗಶಃ ರಸ್ತೆಗಳು ಮುಚ್ಚಲ್ಪಟ್ಟಿದ್ದು ರಸ್ತೆ ಬದಿಯ ಮುಳ್ಳುಕಂಟಿಗಳನ್ನು ತೆರವುಗೊಳಿಸಲು ಪ್ರತಿವರ್ಷ ಅನುದಾನ ನೀಡಲ್ಪಟ್ಟರೂ ಲೋಕೋಪಯೋಗಿ ಇಲಾಖೆ ಮಾತ್ರ ಮುಳ್ಳುಕಂಟಿಗಳನ್ನು ಸ್ವಚ್ಚಗೊಳಿಸಿ ಸುಗಮ ಸಂಚಾರಕ್ಕೆ ಮಾತ್ರ ಅನುಕೂಲ ಮಾಡಿಕೊಟ್ಟಿಲ್ಲ. ಇದರಿಂದಾಗಿ ರಾತ್ರಿ ಹೊತ್ತಿನಲ್ಲಿ ಪ್ರಯಾಣಿಸುವ ಬೈಕ್ ಸವಾರರಿಗೆ ಹಲವು ಅವಘಡಗಳು ಸಂಭವಿಸುತ್ತಿದ್ದು ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ತೆರಳುವ ತಿರುವುಗಳಲ್ಲಿ ಸೂಚನಾ ಫಲಕಗಳಲ್ಲಿದ ಕಾರಣ ವಾಹನ ಸವಾರರಿಗೆ ದಿಕ್ಕು ತಪ್ಪುತ್ತಿದೆ. ಅಲ್ಲದೇ ಅವಘಡಗಳು ಸಂಭವಿಸುತ್ತಿವೆ. ಲೋಕೋಪಯೋಗಿ ಇಲಾಖೆ ಮೈಲುಗಲ್ಲು ಹಾಗೂ ಸೂಚನಾ ಫಲಕಗಳನ್ನು ಸಮರ್ಪಕವಾಗಿ ನಿರ್ಮಿಸಬೇಕಿದೆ
ಬಸವರಾಜ ಕಾಳೆ ತಾಲ್ಲೂಕು ಅಧ್ಯಕ್ಷರು ಭೀಮ ಆರ್ಮಿ ಸಂಘಟನೆ
ನಾನು ಇತ್ತಿಚೇಗೆ ವರ್ಗಾವಣೆಯಾಗಿ ಬಂದಿದ್ದು ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಸಮರ್ಪಕ ರೀತಿಯಲ್ಲಿ ಮೈಲುಗಲ್ಲುಗಳು ಹಾಗೂ ಸೂಚನಾ ಫಲಕಗಳ ಅಳವಡಿಕೆಗೆ ಹಾಗೂ ರಸ್ತೆ ಬದಿಯ ಮುಳ್ಳುಕಂಟಿಗಳ ತೆರವಿಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುತ್ತೆನೆ.
ಜಿ.ಎಸ್.ಪಾಟೀಲ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ರೋಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.