ರೋಣ: ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆಗೆ ಬರುವ ಅನುದಾನದಲ್ಲಿ ಕೆಲಸ ಮಾಡದೇ ಖರ್ಚು ಹಾಕಲಾಗಿದೆ ಎಂದು ಪುರಸಭೆ ಸದಸ್ಯ ಸಂತೋಷ ಕಡಿವಾಲ ಮುಖ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಸಭಾಭವನದಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ, ಪಟ್ಟಣ ವಿವಿಧ ವಾರ್ಡ್‌ಗಳಲ್ಲಿ ಮಿಲಾಥಿನ್ ಪುಡಿ ಸಿಂಪಡಣೆಗೆ ಮಾಡಲಾಗಿರುವ ಖರ್ಚಿನ ವಿವರವನ್ನು ಮುಖ್ಯಾಧಿಕಾರಿ ರಮೇಶ ಹೊಸಮನಿ ಮಂಡಿಸುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಅವರು, ‘ಪುರಸಭೆಯಲ್ಲಿ 23 ವಾರ್ಡುಗಳಿದ್ದು, ಯಾವ ವಾರ್ಡ್‌ನಲ್ಲಿ ಮಿಲಾಥಿನ್ ಸಿಂಪಡಣೆ ಮಾಡಿದ್ದೀರಿ? ನಮ್ಮ ಗಮನಕ್ಕೆ ಬಂದೇ ಇಲ್ಲ’ ಎಂದು ಆಕ್ಷೇಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಇತರ ಸದಸ್ಯರು, ‘ಈವರೆಗೂ ನಮ್ಮ ವಾರ್ಡ್‌ಗಳಲ್ಲಿ ಮಿಲಾಥಿನ್ ಸಿಂಪಡಣೆ ಮಾಡಿದ ಬಗ್ಗೆ ನಮಗೆ ಗೊತ್ತಿಲ್ಲ. ಕೂಡಲೇ ಪ್ರತಿ ವಾರ್ಡ್‌ಗೆ ಮಿಲಾಥಿನ್ ಸಮರ್ಪಕವಾಗಿ ಸಿಂಪಡಣೆ ಮಾಡಬೇಕು’ ಎಂದು ಆಗ್ರಹಿಸಿದರು.
ಎಲ್ಲ ವಾರ್ಡ್‌ಗಳಲ್ಲಿ ಪುಡಿ ಸಿಂಪಡಣೆ ಮಾಡುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
‘14ನೇ ವಾರ್ಡ್‌ನಲ್ಲಿ ಮೋಟರ್ ರಿಪೇರಿಗಾಗಿ ಖರ್ಚು ತೋರಿಸಿದ್ದೀರಿ. ಆದರೆ ಅಲ್ಲಿ ಯಾವುದೇ ರಿಪೇರಿ ಆಗಿಲ್ಲ. ಈ ಹಿಂದೆ ಮೋಟರ್ ಕೆಟ್ಟು ನಿಂತಾಗಲೂ ನಾವೇ ಸ್ವಂತ ಹಣ ಖರ್ಚು ಮಾಡಿ ರಿಪೇರಿ ಮಾಡಿಸಿದ್ದೇವೆ. ನೀವು ಮೊಟರ್ ರಿಪೇರಿ ಮಾಡದೇ ಖರ್ಚು ಯಾಕೆ ಹಾಕಿದ್ದೀರಿ’ ಎಂದು ಸದಸ್ಯೆ ವಿಜಯಲಕ್ಷ್ಮೀ ಕೊಟಗಿ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನೀರು ಸರಬರಾಜು ಸಿಬ್ಬಂದಿ ಬಸವರಾಜ ಕಿರೇಸೂರ, ‘ಮೊಟರ್ ರಿಪೇರಿಗಾಗಿ ಹೊರ ತೆಗೆಯಲಾಗಿದ್ದು ತಾಂತ್ರಿಕ ತೊಂದರೆ ಉಂಟಾಗಿದೆ. ಶೀಘ್ರದಲ್ಲಿಯೇ ರಿಪೇರಿ ಮಾಡಿಸಲಾಗುವುದು’ ಎಂದರು.
ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನಮಂತ ತಳ್ಳಿಕೇರಿ, ಮಾಜಿ ಉಪಾಧ್ಯಕ್ಷ ಮಿಥುನ್ ಜಿ.ಪಾಟೀಲ, ಗದಿಗೆಪ್ಪ ಕಿರೇಸೂರ, ಬಾವಾಸಾಬ ಬೆಟಗೇರಿ, ದಾವಲಸಾಬ ಬಾಡಿನ, ಸಂಗಪ್ಪ ಜಿಡ್ಡಿಬಾಗಿಲ, ಆನಂದ ಚಂಗಳಿ, ಶಕುಂತಲಾ ದೇಶಣ್ಣವರ ಇದ್ದರು.
ನಿರ್ಮಾಣಗೊಳ್ಳದ ಸ್ವಾಗತ ಕಮಾನು– ಆಕ್ರೋಶ
‘ನಾವು ಸದಸ್ಯರಾಗಿ ಆಯ್ಕೆಯಾದಾಗಿನಿಂದ ಪಟ್ಟಣದಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡುವಂತೆ ಹೇಳುತ್ತ ಬಂದಿದ್ದೇವೆ. ನಮ್ಮ ಅಧಿಕಾರ ಅವಧಿ ಮುಗಿಯುತ್ತ ಬಂದರೂ ಕಮಾನು ನಿರ್ಮಾಣಗೊಂಡಿಲ್ಲ. ಪ್ರತಿ ಸಭೆಯಲ್ಲಿ ಠರಾವು ಮಾಡುತ್ತೀರಿ ಆದರೆ ಯೋಜನೆ ಮಾತ್ರ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಸಂತೋಷ ಕಡಿವಾಲ ಆರೋಪಿಸುತ್ತಿದ್ದಂತೆ ‘ಈ ಬಾರಿ ಕಮಾನು ನಿರ್ಮಾಣಕ್ಕೆ ಒತ್ತು ನೀಡಿ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೇವೆ’ ಎಂದು ಮುಖ್ಯಾಧಿಕಾರಿ ಸಮಜಾಯಿಷಿ ನೀಡಿದರು. ‘ವಸತಿ ಬಡಾವಣೆ ವಿನ್ಯಾಸ ಮಾಡುವ ಸಂದರ್ಭದಲ್ಲಿ (ಕೃಷಿಯೇತರ–ಎನ್.ಎ) ಪ್ಲಾಟುಗಳಿಗೆ ಮಂಜೂರಾತಿ ನೀಡುವ ಪೂರ್ವದಲ್ಲಿ ಸಮರ್ಪಕ ದಾಖಲೆಗಳನ್ನು ಸಭೆಗೆ ಹಾಜರು ಪಡಿಸಬೇಕು. ಸಮರ್ಪಕ ಮೂಲಸೌಲಭ್ಯ ಕಲ್ಪಿಸಲಾಗಿದೆಯೇ ಎಂದು ಪರಿಶೀಲಿಸಬೇಕು. ಕೆಲವು ಕಡೆಗಳಲ್ಲಿ ಉದ್ಯಾನಗಳಿಗಾಗಿ ಜಾಗ ಬಿಟ್ಟಿಲ್ಲ. ಎಲ್ಲವನ್ನು ಪರಿಶೀಲಿಸಿ ನಿಯಮ ಬದ್ಧವಾಗಿದ್ದರೆ ಮಾತ್ರ ಪರವಾನಗಿ ನೀಡಿ’ ಎಂದು ಸರ್ವ ಸದಸ್ಯರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.