ರೋಣ: ಹೆಣ್ಣುಮಕ್ಕಳಲ್ಲಿ ಕಂಡು ಬರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ 9 ವರ್ಷದಿಂದ 14 ವರ್ಷದ ಶಾಲಾ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆಯನ್ನು ಉಚಿತವಾಗಿ ನೀಡುವ ಕಾರ್ಯ ಜುಲೈ 30ರಂದು ಆರಂಭಗೊಳ್ಳಲಿದೆ.
ಬಸಮ್ಮ ಪಾಟೀಲ ಅವರ ಪುಣ್ಯಸ್ಮರಣೆ ಅಂಗವಾಗಿ ಶಾಸಕ ಜಿ.ಎಸ್. ಪಾಟೀಲ ಅವರು ಸ್ವಂತ ಖರ್ಚಿನಲ್ಲಿ ಉಚಿತ ಲಸಿಕೆ ಹಾಕಿಸುವ ಕಾರ್ಯಕ್ರಮ ರೂಪಿಸಿದ್ದು, ಬಡಮಕ್ಕಳಿಗೆ ಸದುಪಯೋಗವಾಗಲಿದೆ. ಜುಲೈ 30ರಂದು ಪಟ್ಟಣದ ರಾಜೀವಗಾಂಧಿ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಏನಿದು ಎಚ್‌ಪಿವಿ ಲಸಿಕೆ:
ಗರ್ಭಕಂಠದ ಕ್ಯಾನ್ಸರ್ ಮತ್ತು ಅದರ ಅಪಾಯದ ಬಗ್ಗೆ ಹಾಗೂ ಎಚ್‍ಪಿವಿ ಲಸಿಕೆ ಕುರಿತು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಮುದಾಯದ ನಾಯಕರುಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೆಣ್ಣುಮಕ್ಕಳ ಭವಿಷ್ಯದಲ್ಲಿ ಕಂಡು ಬರುವ ಕ್ಯಾನ್ಸರ್ ರೋಗವನ್ನು ಪ್ರಾಥಮಿಕ ಹಂತದಲ್ಲಿ ತಡೆಗಟ್ಟುವ ನಿಟ್ಟಿನಲ್ಲಿ ಈ ಲಸಿಕೆ ಉಪಯುಕ್ತವಾಗಲಿದೆ.
ಪ್ರತಿ ಶಾಲಾ ಹೆಣ್ಣುಮಕ್ಕಳಿಗೆ ಉಚಿತ ಲಸಿಕೆ:
9 ವರ್ಷದಿಂದ 14 ವರ್ಷದೊಳಗಿನ ಹೆಣ್ಣು ಮಗುವಿಗೆ ಈ ಲಸಿಕೆಯನ್ನು ನೀಡಲಾಗುತ್ತಿದೆ. ₹2800 ರಿಂದ ₹3500ವರೆಗೆ ಲಸಿಕೆ ವೆಚ್ಚವಾಗಿದ್ದು, ಶಾಸಕ ಜಿ.ಎಸ್.ಪಾಟೀಲ ಅವರು ಹೆಣ್ಣುಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಲಸಿಕೆಯನ್ನು ಉಚಿತವಾಗಿ ನೀಡುವ ಮಹತ್ತರ ಯೋಜನೆ ರೂಪಿಸಿದ್ದಾರೆ. ಪ್ರಾರಂಭಿಕ ಹಂತದಲ್ಲಿ 500 ಮಕ್ಕಳಿಗೆ ಹಾಗೂ ನಂತರ ರೋಣ ಹಾಗೂ ಗಜೇಂದ್ರಗಡ ತಾಲ್ಲೂಕಿನ 9,000 ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲು ಸಿದ್ಧತೆಗಳನ್ನು ನಡೆಸಿದ್ದಾರೆ.
ಎಚ್‌ಪಿವಿ ಲಸಿಕಾ ಕಾರ್ಯಕ್ರಮವನ್ನು ರೋಣ ಹಾಗೂ ಗಜೇಂದ್ರಗಡ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ರಾಜೀವ್‌ಗಾಂಧಿ ಆಯುರ್ವೇದಿಕ್ ಕಾಲೇಜು ಪ್ರಾಚಾರ್ಯರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ. ಪ್ರತಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಹೆಣ್ಣುಮಕ್ಕಳಿಗೆ ಲಸಿಕೆ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ.
ನಮ್ಮ ತಾಯಿಯವರು ಅವರ ಪುಣ್ಯಸ್ಮರಣೆ ಅಂಗವಾಗಿ ರೋಣ ಹಾಗೂ ಗಜೇಂದ್ರಗಡ ತಾಲ್ಲೂಕಿನ ಶಾಲೆಗಳ ಹೆಣ್ಣುಮಕ್ಕಳಿಗೆ ಉಚಿತ ಲಸಿಕೆ ಹಾಕಿಸುವ ಮೂಲಕ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಕಾಳಜಿ ವಹಿಸುವ ಕಾರ್ಯ ಕೈಗೊಳ್ಳುತ್ತಿದ್ದೇವೆಜಿ.ಎಸ್. ಪಾಟೀಲ ಶಾಸಕರು
ಎಚ್‌ಪಿವಿ ಲಸಿಕೆಯನ್ನು ಮುಂದುವರಿದ ರಾಷ್ಟ್ರಗಳು ಮಾತ್ರ ಹೆಣ್ಣು ಮಕ್ಕಳಿಗೆ ನೀಡುತ್ತಿವೆ. ಸದ್ಯ ಜಿ.ಎಸ್. ಪಾಟೀಲ ಅವರು ಮಾಡುತ್ತಿರುವ ಕಾರ್ಯ ಮುಂದೆ ಸಾಮಾಜಿಕ ಕಾರ್ಯಕ್ರಮವನ್ನಾಗಿ ರೂಪಿಸುವಲ್ಲಿ ಮಾದರಿಯಾಗಲಿದೆಐ.ಬಿ. ಕೊಟ್ಟೂರಶೆಟ್ಟಿ ಪ್ರಾಚಾರ್ಯರು ರಾಜೀವ್ ಗಾಂಧಿ ಆಯುರ್ವೇದ ಮಹಾವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.