ರೋಣ: ತಾಲ್ಲೂಕು ಕೇಂದ್ರದ ಪಕ್ಕದಲ್ಲಿನ ಮುದೇನಗುಡಿ ಗ್ರಾಮವು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಕುಡಿಯುವ ನೀರಿಗಾಗಿ ಸ್ಥಳೀಯರು ಕೊಡಗಳನ್ನು ಹಿಡಿದು ಅಲೆದಾಡುವ ಸ್ಥಿತಿ ನಿರ್ಮಾಣವಾಗಿವೆ.
ಗ್ರಾಮದಲ್ಲಿ ವ್ಯವಸ್ಥಿತವಾದ ಚರಂಡಿ ಇಲ್ಲ. ಕೊಳಚೆ ನೀರು ಮನೆಗಳ ಪಕ್ಕದಲ್ಲಿಯೇ ಹರಿಯುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕುರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದೇನಗುಡಿ ಗ್ರಾಮದಲ್ಲಿ 2,500 ಜನಸಂಖ್ಯೆ ಇದೆ. ಗ್ರಾಮದ ಜನರಿಗೆ ಊರ ಮುಂದಿನ ಕೊಳವೆಬಾವಿ ಏಕೈಕ ಕುಡಿಯುವ ನೀರಿನ ಮೂಲ. ಜನರು ಸರತಿಯಲ್ಲಿ ನಿಂತು ಕುಡಿಯುವ ನೀರು ತರಬೇಕಾದ ಸ್ಥಿತಿ ಇದೆ.
ಅಧಿಕಾರಿಗಳ ನಿರಂತರ ನಿರ್ಲಕ್ಷ್ಯದಿಂದಾಗಿ ಹಲವು ದಿನಗಳ ನೀರಿನ ಸಮಸ್ಯೆಯೂ ಇಂದಿಗೂ ಬಗೆಹರಿದಿಲ್ಲ. ಗ್ರಾಮದ ಎಲ್ಲ ಮನೆಗಳಿಗೆ ಈಗಾಗಲೇ ಜಲ ಜೀವನ್ ಮಿಷನ್ ಯೋಜನೆ ಅಡಿ ಕೊಳಾಯಿ ಸಂಪರ್ಕ ಕಲ್ಪಿಸಿದ್ದರೂ ಇದುವರೆಗೂ ನೀರು ಪೂರೈಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಕೊಳಾಯಿಗಳು ತುಕ್ಕು ಹಿಡಿದು ಹಾಳಾಗುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಗ್ರಾಮದಲ್ಲಿ ಸ್ವಚ್ಛತೆಯೂ ಇಲ್ಲ. ಇಲ್ಲಿನ ಪರಿಶಿಷ್ಟ ಕಾಲೊನಿಯಲ್ಲಿ ಚರಂಡಿ ವ್ಯವಸ್ಥೆಯಿಲ್ಲ. ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಇದರಿಂದಾಗಿ ಇಡೀ ಕಾಲೊನಿಯು ದುರ್ವಾಸನೆಯಿಂದ ಕೂಡಿದೆ. ರೋಗ ಹರಡುವ ಭೀತಿಯೂ ಇದೆ. ಸ್ವಚ್ಛತೆಗೆ ಸಿಬ್ಬಂದಿಯ ಕೊರತೆಯೂ ಇದೆ. ಇಲ್ಲಿನ ಹುಲ್ಲೂರು ರಸ್ತೆಯು ಒತ್ತುವರಿಯಾಗಿದೆ. ಇದರಿಂದಾಗಿ ವ್ಯವಸ್ಥಿತ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ತೊಂದರೆಯೂ ಆಗಿದೆ.
ಶೌಚಾಲಯ ಸಮಸ್ಯೆ: ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲ. ಜನರು ಬಯಲಿನಲ್ಲಿಯೇ ಮಲ–ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಹಲವೆಡೆ ಕೊಳಚೆ ಪ್ರದೇಶಗಳು ನಿರ್ಮಾಣವಾಗಿವೆ.
ಗ್ರಾಮದಲ್ಲಿ ಉತ್ತಮ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಎಂದು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಲ್ಲಿ ಸ್ಥಳೀಯರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಇತ್ತಕಡೆ ಗಮನಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದ ಸಮಸ್ಯೆಗಳ ಪರಿಹಾರದ ಬಗ್ಗೆ ಸ್ಥಳೀಯ ಪಿಡಿಒ ಐ.ಎಫ್.ಬೋದ್ಲೇಖಾನ್ ಅವರಿಗೆ ದೂರವಾಣಿ ಕರೆ ಮಾಡಿದಾಗ ಅವರು ಕರೆಯನ್ನು ಸ್ವೀಕರಿಸಲಿಲ್ಲ.
ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಗುತ್ತಿದಾರರಿಗೆ ನೋಟಿಸ್ ನೀಡಲಾಗಿದೆ. ಮುದೇನಗುಡಿ ಗ್ರಾಮಕ್ಕೆ ಡಿಬಿಒಟಿ ಹಾಗೂ ಕೊಳವೆಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.ಚಂದ್ರಕಾಂತ ನೆರಲೇಕರ್ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರೋಣ
ಮುಂದಿನ ವರ್ಷದ ಕಾರ್ಯ ಯೋಜನೆಯಲ್ಲಿ ಮುದೇನಗುಡಿ ಗ್ರಾಮದಲ್ಲಿ ಚರಂಡಿ ರಸ್ತೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು.ಚಂದ್ರಶೇಖರ ಕಂದಕೂರ ತಾಲ್ಲೂಕು ಪಂಚಾಯಿತಿ ಇಒ ರೋಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.