ADVERTISEMENT

ರೋಣ | ರೈಲು ನಿಲ್ದಾಣ; ಅವ್ಯವಸ್ಥೆಯ ತಾಣ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 4:55 IST
Last Updated 4 ಡಿಸೆಂಬರ್ 2023, 4:55 IST
ನೆರಳಿನ ವ್ಯವಸ್ಥೆಯಿಲ್ಲದ ಮಲ್ಲಾಪೂರ ರೈಲು ನಿಲ್ದಾಣ
ನೆರಳಿನ ವ್ಯವಸ್ಥೆಯಿಲ್ಲದ ಮಲ್ಲಾಪೂರ ರೈಲು ನಿಲ್ದಾಣ   

ರೋಣ: ಅವಿಭಜಿತ ರೋಣ ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಆಡಳಿತ ವ್ಯವಸ್ಥೆಗಳು ತಾಲ್ಲೂಕಿನ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಅನುಸರಿಸಿದ ಉದಾಸೀನತೆಯೇ ಇದಕ್ಕೆ ಮುಖ್ಯ ಕಾರಣ. ಅದರಲ್ಲಿಯೂ ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲಿ ನಿರ್ಮಾಣವಾದ ರೈಲು ನಿಲ್ದಾಣಗಳು ಇಂದಿಗೂ ಅತ್ಯಂತ ದಯನೀಯ ಸ್ಥಿತಿಯಲ್ಲಿರುವುದೇ ಇದಕ್ಕೆ ಸಾಕ್ಷಿ.

ಅವಿಭಜಿತ ರೋಣ ತಾಲ್ಲೂಕಿನ ಪಶ್ಚಿಮ ಗಡಿಯಲ್ಲಿ ಹಾಯ್ದು ಹೋಗುವ ಗದಗ– ಬಾಗಲಕೋಟೆ ರೈಲು ಸಂಪರ್ಕ ಮಾರ್ಗ ತಾಲ್ಲೂಕಿನ ಏಕೈಕ ರೈಲು ಮಾರ್ಗವಾಗಿದೆ. ಉಳಿದಂತೆ ತಾಲ್ಲೂಕಿನ ಯಾವುದೇ ಭಾಗ ಇದುವರೆಗೂ ರೈಲು ಸಂಪರ್ಕ ವ್ಯವಸ್ಥೆ ಹೊಂದಿಲ್ಲ. ಈ ಮಾರ್ಗದಲ್ಲಿ ಮಲ್ಲಾಪುರ ಮತ್ತು ಹೊಳೆಆಲೂರ ರೈಲು ನಿಲ್ದಾಣಗಳು ಪ್ರಮುಖವಾಗಿದ್ದು, ಸೋಮನಕಟ್ಟಿ ಗ್ರಾಮದ ನಿಲ್ದಾಣ ಅಷ್ಟೇನೂ ಪ್ರಾಮುಖ್ಯತೆ ಪಡೆದಿಲ್ಲ. ಇದು ಪ್ಯಾಸೆಂಜರ್ ರೈಲುಗಳು ಮಾತ್ರ ನಿಲ್ಲುವ ನಿಲ್ದಾಣವಾಗಿದೆ.

ತಾಲ್ಲೂಕಿನ‌ ಮಲ್ಲಾಪುರ ಗ್ರಾಮದ ರೈಲು ನಿಲ್ದಾಣ ಮತ್ತು ಹೊಳೆಆಲೂರ ಗ್ರಾಮದ ನಿಲ್ದಾಣಗಳು ತಲಾ ಎರಡೆರಡು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು, ನಾಲ್ಕು ಹಳಿ ಮಾರ್ಗಗಳನ್ನು ಹೊಂದಿವೆ. ಪ್ರತಿನಿತ್ಯ ರೋಣ ತಾಲ್ಲೂಕಿನಿಂದ ಗದಗ, ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ, ಸೊಲ್ಲಾಪೂರ, ಮುಂಬೈ ಸೇರಿದಂತೆ ಹಲವು‌ ಪ್ರಮುಖ ನಗರಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆಯಾಗಲಿ, ಮೂಲಸೌಲಭ್ಯಗಳಾಗಲಿ ಈ ನಿಲ್ದಾಣಗಳು ಹೊಂದಿಲ್ಲ.

ADVERTISEMENT

ಪ್ರಮುಖವಾಗಿ ಎರಡೂ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕನಿಷ್ಠಪಕ್ಷ ಶುದ್ಧ ಕುಡಿಯುವ ನೀರು ಲಭ್ಯವಿಲ್ಲ. ರೈಲ್ವೆ ಇಲಾಖೆ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಕಿರುವ ಕೊಳಾಯಿಗಳಲ್ಲಿ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲದ ಕಾರಣ ನಿಲ್ದಾಣದ ಸಿಬ್ಬಂದಿಯೇ ಹೊರಗಿನಿಂದ ನೀರು ಖರೀದಿಸಿ ತರುತ್ತಾರೆ. ಇನ್ನು ಪ್ರಯಾಣಿಕರು ಬೇಸಿಗೆ ಕಾಲದಲ್ಲಿ ಶುದ್ಧ ಕುಡಿಯುವ ನೀರು ಸಿಗದೇ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಮಲ್ಲಾಪುರ ಮತ್ತು ಹೊಳೆಆಲೂರಿನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ನೆರಳಿನ ವ್ಯವಸ್ಥೆ ಕೂಡ ಇಲ್ಲ. ಪ್ರಯಾಣಿಕರು ಬಿಸಿಲು ಮತ್ತು ಮಳೆಯಿಂದ ಆಗುವ ತೊಂದರೆಗಳಿಗೆ ಒಡ್ಡಿಕೊಳ್ಳುತ್ತಲೇ ರೈಲುಗಳ ಬರುವಿಕೆಯನ್ನು ಕಾಯಬೇಕಾದ ಪರಿಸ್ಥಿತಿ ಇದೆ.

ಹೊಳೆಆಲೂರ ನಿಲ್ದಾಣದ ಸಮಸ್ಯೆಗಳ ಬಗ್ಗೆ ಮೇಲಾಧಿಕಾರಿಗಳು ಹಾಗೂ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಗಮನಕ್ಕೆ ತಂದಿದ್ದೇವೆ. ಶೀಘ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಇಲಾಖೆ ಕ್ರಮ ಕೈಗೊಳ್ಳಲಿದೆ.
ಆರ್.ಕೆ.ಸುಂದರಂ, ಸ್ಟೇಷನ್ ಮಾಸ್ಟರ್ ಹೊಳೆಆಲೂರ

ಮಹಿಳೆಯರ ಸುರಕ್ಷತೆ ಮತ್ತು ಕಾಳಜಿಯ ಬಗ್ಗೆ ಮಾತನಾಡುವ ಸರ್ಕಾರಗಳು ಇವೆರಡೂ ನಿಲ್ದಾಣಗಳಲ್ಲಿ ಆ ಮಾತುಗಳನ್ನು ಮರೆತಿವೆ. ಮಹಿಳೆಯರು ಬಳಸಲು ಯೋಗ್ಯವಲ್ಲದ ಶೌಚಾಲಯ ವ್ಯವಸ್ಥೆ ಹೊಂದಿದ್ದು, ಮಹಿಳೆಯರ ವಿಶ್ರಾಂತಿ ಕೊಠಡಿಗಳು ಇಲ್ಲ ಎಂದು ಮಹಿಳಾ ಪ್ರಯಾಣಿಕರು ಕಿಡಿಕಾರಿದ್ದಾರೆ.

ಆದಷ್ಟು ಬೇಗ ಇವೆರಡೂ ರೈಲ್ವೆ ನಿಲ್ದಾಣಗಳನ್ನು ಮಹಿಳಾ ಸ್ನೇಹಿಯಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ನಿಲ್ದಾಣಗಳಲ್ಲಿ ಕಸ ಗುಡಿಸಲು ಸಫಾಯಿವಾಲಾಗಳ ಕೊರತೆ ಇದೆ. ಪ್ರಮುಖವಾಗಿ ನಿಲ್ದಾಣದ ತ್ಯಾಜ್ಯ ನೀರು ಹೊರಹೋಗಲು ಚರಂಡಿ ವ್ಯವಸ್ಥೆ ಕೂಡ ಇಲ್ಲದ ಹೀನಾಯ ಸ್ಥಿತಿಯಲ್ಲಿವೆ. ಸಂಜೆಯಾದರೆ ಸಾಕು ಸೊಳ್ಳೆಗಳ ಕಾಟ ಪ್ರಯಾಣಿಕರನ್ನು ಹೈರಾಣಾಗಿಸುತ್ತಿದೆ. ಇಂತಹ ಅವ್ಯವಸ್ಥೆ ಮಧ್ಯೆಯೇ ಪ್ರತಿನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಿದ್ದು, ನರಕಯಾತನೆ ಅನುಭವಿಸುವಂತಾದರೂ ಇಲಾಖೆಯ ಅಧಿಕಾರಿ ವರ್ಗವಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಕಡೆ ಗಮನ ಹರಿಸದಿರುವುದು ಸೋಜಿಗದ ಸಂಗತಿ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

ಸೌಲಭ್ಯವಂಚಿತ ವಸತಿ ಗೃಹಗಳು

ಪ್ರಯಾಣಿಕರ ಸಂಕಷ್ಟ ಒಂದೆಡೆಯಾದರೆ ಸ್ವತಃ ರೈಲ್ವೆ ಇಲಾಖೆಯ ಸಿಬ್ಬಂದಿ ಕೂಡ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.  ಹೊಳೆಆಲೂರ ನಿಲ್ದಾಣದ ಪಕ್ಕ ನಿರ್ಮಿಸಿರುವ ಸಿಬ್ಬಂದಿಯ ವಸತಿಗೃಹಗಳೂ ಸೌಲಭ್ಯ ವಂಚಿತವಾಗಿದ್ದು ಕಳಪೆ ನಿರ್ಮಾಣದ ಕಾರಣದಿಂದ ಇಂದಿನವರೆಗೂ ಬಳಕೆಗೆ ಬಾರದಂತಿವೆ. ‘ಖುದ್ದು ಸಿಬ್ಬಂದಿಗೆ ಕುಡಿಯಲು ಶುದ್ದ ನೀರು ಪೂರೈಸಲಾಗದ ರೈಲ್ವೆ ಇಲಾಖೆಯ ಆಡಳಿತ ವ್ಯವಸ್ಥೆ ಕಂಡು ಜನರೇ ಕನಿಕರ ಪಡುವಂತಾಗಿರುವುದು ದುರಂತ’ ಎಂದು ಸ್ಥಳೀಯರು ವ್ಯಂಗ್ಯವಾಡಿದ್ದಾರೆ.

ಜನ ಏನಂತಾರೆ?

ರೋಣ ತಾಲ್ಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಪ್ರಮುಖವಾಗಿ ರೈಲು ಸಂಪರ್ಕ ವ್ಯವಸ್ಥೆ ವಿಸ್ತರಣೆಯಾಗಬೇಕಿದೆ. ಹುಬ್ಬಳ್ಳಿ– ಹೈದರಾಬಾದ್‌ ವಯಾ ರೋಣ ಮಾರ್ಗ ನಿರ್ಮಾಣ ಮಾಡಲು ಈ ಭಾಗದ ಜನರ ಬೇಡಿಕೆ ಇದೆ. ಆದರೆ ಈಗಿರುವ ಎರಡೂ ನಿಲ್ದಾಣಗಳು ಸೌಲಭ್ಯ ವಂಚಿತವಾಗಿರುವುದು ತಾಲ್ಲೂಕಿನ ಜನತೆಯಲ್ಲಿ ನಿರಾಸೆ ಮೂಡಿಸಿದೆ – ಅಬ್ದುಲ್‌ಸಾಬ್‌ ಹೊಸಮನಿ ಸಾಮಾಜಿಕ ಕಾರ್ಯಕರ್ತ ರೋಣ

ಹೊಳೆಆಲೂರ ರೈಲು ನಿಲ್ದಾಣದಲ್ಲಿ ಸರಿಯಾದ ಆಸನಗಳಿಲ್ಲದೆ ಜನರಿಗೆ ತೊಂದರೆಯಾಗಿದ್ದು  ಮಹಿಳೆಯರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ವಿಶೇಷವಾಗಿ ಟಿಕೆಟ್ ಕೌಂಟರ್ ಸಿಬ್ಬಂದಿ ಹೊರರಾಜ್ಯದವರಾಗಿದ್ದು ವೃದ್ದರು ಮತ್ತು ಮಹಿಳಾ ಪ್ರಯಾಣಿಕರೊಂದಿಗಿನ ಅವರ ವರ್ತನೆಗಳು ಸರಿ ಇಲ್ಲ. ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ – ಎಂ.ಎಚ್.ನದಾಫ ಅಧ್ಯಕ್ಷರು ಸ್ವಾಭಿಮಾನಿ ಕರವೇ ರೋಣ ತಾಲ್ಲೂಕು

ಹೊಳೆಆಲೂರ ರೈಲು ನಿಲ್ದಾಣದಲ್ಲಿ ಕುಡಿಯುವ ನೀರಿನ ತೊಂದರೆ ವಿಪರೀತವಿದ್ದು ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕಿದೆ. ಅಂಗವಿಕಲರಿಗೆ ಎರಡನೇ ಫ್ಲಾಟ್‌ಫಾರ್ಮ್‌ಗಳಿಗೆ ತೆರಳಲು ಸೂಕ್ತ ವ್ಯವಸ್ಥೆಗಳಿಲ್ಲ. ಮುಂಗಡ ಟಿಕೆಟ್ ನೀಡಲು ಪ್ರತ್ಯೇಕ ಕೌಂಟರ್ ತೆರೆದಿಲ್ಲ. ಪ್ರಮುಖವಾಗಿ ಮುಂಬೈ ರೈಲು ನಿಲುಗಡೆ ಇಲ್ಲ. ಇಂಟರ್‌ಸಿಟಿ ರೈಲು ತೆಗೆದಿದ್ದು ಸಮಸ್ಯೆಯಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ರೈಲ್ವೆ ಅಧಿಕಾರಿಗಳು ಇಚ್ಚಾಶಕ್ತಿ ತೋರಬೇಕು – ಮಾರುತಿ ಮಂಡಸೊಪ್ಪಿ ಉಪಾಧ್ಯಕ್ಷರು ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಹೊಳೆಆಲೂರ

ನಮ್ಮ ಭಾಗದ ರೈತರು ಉಳ್ಳಾಗಡ್ಡಿ ಮೆಣಸಿನಕಾಯಿ ಅತ್ಯಧಿಕ ಪ್ರಮಾಣಲ್ಲಿ ಬೆಳೆಯುತ್ತಿದ್ದು ದೂರದ ಬೆಂಗಳೂರು ಪುಣೆ– ಹೈದರಾಬಾದ್ ಬ್ಯಾಡಗಿ ಹುಬ್ಬಳ್ಳಿಗೆ ಸಾಗಣೆ ಮಾಡಬೇಕಿದೆ. ಲಾರಿ ಮಾಲೀಕರು ಹೆಚ್ಚಿನ ಬಾಡಿಗೆ ವಿಧಿಸುತ್ತಾರೆ. ಆದ್ದರಿಂದ ನಮ್ಮ ಭಾಗಕ್ಕೆ ಕನಿಷ್ಠ ಫಸಲಿನ ಸಮಯದಲ್ಲಾದರೂ ಕಿಸಾನ್ ರೈಲು ಆರಂಭಿಸಬೇಕು – ದೊಡ್ಡಬಸಪ್ಪ ನವಲಗುಂದ ರೈತ ಸಂಘದ ತಾಲ್ಲೂಕು ಸಂಘಟನಾ ಕಾರ್ಯದರ್ಶಿ

ಮಲ್ಲಾಪೂರ ರೈಲು ನಿಲ್ದಾಣ ಸಂಪರ್ಕಿಸುವ ಹದಗೆಟ್ಟ ರಸ್ತೆ
ಮಲ್ಲಾಪೂರ ರೈಲು ನಿಲ್ದಾಣದ ಒಡೆದು ಹೋಗಿರುವ ಡ್ರೈನೇಜ್ ಪೈಪ್‌ಗಳು
ಅವ್ಯವಸ್ಥೆಯ ತಾಣವಾಗಿರುವ ಹೊಳೆಆಲೂರ ರೈಲು ನಿಲ್ದಾಣ
ಸದಾ ಬೀಗ ಜಡಿದಿರುವ ಮಹಿಳಾ ವಿಶ್ರಾಂತಿ ಕೊಠಡಿ
ಹೊಳೆಆಲೂರ ರೈಲು ನಿಲ್ದಾಣದ ಕಟ್ಟಡ ಕಾಮಗಾರಿ ನಡೆದಿರುವುದು
ಹೊಳೆಆಲೂರ ರೈಲು ನಿಲ್ದಾಣದ 2ನೇ ಫ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ಆಸನದ ವ್ಯವಸ್ಥೆ ಇಲ್ಲದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.