ADVERTISEMENT

ರೋಣ | ತಾಪಮಾನ ಕುಸಿತ: ಚಳಿಗೆ ತತ್ತರಿಸಿದ ಜನ

ಚಹಾ– ಪಾನ್‌ ವ್ಯಾಪಾರ ಇಳಿಮುಖ; ಬೆಳ್ಳಂಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕಳಿಸುವ ಸವಾಲು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:42 IST
Last Updated 10 ಡಿಸೆಂಬರ್ 2025, 4:42 IST
ರೋಣ ಪಟ್ಟಣದ ರಸ್ತೆ ಬದಿಯಲ್ಲಿ ಬೆಳಿಗನ ಜಾವ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವ ಜನರು
ರೋಣ ಪಟ್ಟಣದ ರಸ್ತೆ ಬದಿಯಲ್ಲಿ ಬೆಳಿಗನ ಜಾವ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವ ಜನರು   

ರೋಣ: ಒಂದು ವಾರದಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ತಾಪಮಾನ ಕುಸಿತವಾಗಿದ್ದು, ಸೋಮವಾರ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು ಮೈಕೊರೆಯುವ ಚಳಿಗೆ ಜನರು ಥಂಡಾ ಹೊಡೆದಿದ್ದಾರೆ. 

ಕಳೆದ ಎರಡು ದಿನಗಳಿಂದ ರಸ್ತೆ ಬದಿಯಲ್ಲಿ ಸಾರ್ವಜನಿಕರು ಸಣ್ಣಗೆ ಉರಿ ಹಾಕಿ, ಚಳಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯ ಎನಿಸಿವೆ.

ಒಕ್ಕಲುತನ ಪ್ರಧಾನವಾದ ರೋಣ ತಾಲ್ಲೂಕಿನಲ್ಲಿ ಸದ್ಯ ಕಡಲೆ ಬೆಳೆಗೆ ಕೀಟನಾಶಕ ಸಿಂಪರಣೆ ಕಾರ್ಯ ಭರದಿಂದ ಸಾಗಿದ್ದು, ನಸುಕಿನಲ್ಲಿ ರೈತರಿಂದ ತುಂಬಿರುತ್ತಿದ್ದ ಪಟ್ಟಣದ ರಸ್ತೆಗಳು ಮತ್ತು ವೃತ್ತಗಳು ಕಳೆದೆರಡು ದಿನಗಳಿಂದ ವಿಪರೀತ ಚಳಿಗೆ ಜನ ಸಂಚಾರವಿಲ್ಲದೆ ಕಳೆಗುಂದಿವೆ. ಚಳಿಗೆ ಜನ ಹೊರ ಬಾರದಿರುವುದರಿಂದ ಬೆಳಿಗ್ಗೆ 4 ಗಂಟೆ ಸುಮಾರಿಗೆ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದ ಪಟ್ಟಣದ ಚಹಾದ ಅಂಗಡಿ, ಬೀಡಾ ಅಂಗಡಿಗಳವರಿಗೆ ವ್ಯಾಪಾರವಿಲ್ಲದಂತಾಗಿದೆ.

ADVERTISEMENT

ಸದ್ಯದ ಶೀತ ವಾತಾವರಣದ ಕಾರಣ ವಾಕಿಂಗ್ ತೆರಳುವವರ ಸಂಖ್ಯೆಯೂ ಸಹ ಕಡಿಮೆಯಾಗಿದೆ. ಚಿಕ್ಕ ಮಕ್ಕಳಿರುವ ಮನೆಯಲ್ಲಿ ಅವರನ್ನು ಬೇಗ ಎಬ್ಬಿಸಿ, ಶಾಲೆಗೆ ಕಳಿಸುವುದೇ ದೊಡ್ಡ ಸವಾಲಾಗಿದೆ. 

ಆದರೆ, ವಿಪರೀತ ಶೀತ ವಾತಾವರಣವು ಕಡಲೆ ಬೆಳೆ ಬೆಳೆಯುತ್ತಿರುವ ರೈತರಲ್ಲಿ ಹರ್ಷ ತಂದಿದೆ. ಕಡಲೆ ಬೆಳೆಗೆ ಚಳಿ ಹೆಚ್ಚಾದಷ್ಟು ಇಳುವರಿ ಹೆಚ್ಚಾಗಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ. ಸದ್ಯ ಕೀಟನಾಶಕಗಳ ಸಿಂಪರಣೆ ಮಾತ್ರ ರೈತಾಪಿ ವರ್ಗಕ್ಕೆ ಸವಾಲಾಗಿ ಪರಿಣಮಿಸಿದೆ.

ಚಿಕ್ಕ ಮಕ್ಕಳನ್ನು ಚಳಿಯಿಂದ ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ. ಶನಿವಾರದಂದು ಬೆಳಿಗ್ಗೆಯೇ ಶಾಲೆಗಳು ಪ್ರಾರಂಭವಾಗುವುದರಿಂದ ಮಕ್ಕಳನ್ನು ಚಳಿಯಲ್ಲಿಯೇ ಶಾಲೆಗೆ ಕಳುಹಿಸಬೇಕಿದೆ
–ಶಕುಂತಲಾ ಗೃಹಿಣಿ
ಚಳಿಯಿಂದ ಜನ ಹೊರ ಬರದಿರುವುದರಿಂದ ವ್ಯಾಪಾರ ಕಡಿಮೆಯಾಗಿದೆ. ಈ ಹಿಂದೆ ದಿನಕ್ಕೆ ಬೆಳಿಗ್ಗೆಯಲ್ಲಿ ₹1000 ವ್ಯಾಪಾರವಾಗುತ್ತಿತ್ತು. ಸದ್ಯ ₹200ರಿಂದ ₹300 ವ್ಯಾಪಾರವಾಗುತ್ತಿದೆ
–ಅಬ್ದುಲ್ ಬೀಡಾ ಅಂಗಡಿ ವ್ಯಾಪಾರಿ
ಚಳಿ ಮತ್ತು ಇಬ್ಬನಿ ಬೀಳುತ್ತಿರುವುದು ಕಡಲೆ ಬೆಳೆಗೆ ಉತ್ತಮವಾಗಿದ್ದು ಚಳಿ ಹೆಚ್ಚಾದಷ್ಟು ಕಡಲೆ ಬೆಳೆಗೆ ಕೀಟಬಾಧೆ ಕಡಿಮೆಯಾಗುತ್ತದೆ. ಇದರಿಂದ ಇಳುವರಿ ಕೂಡ ಹೆಚ್ಚುವ ನಿರೀಕ್ಷೆ ಇದೆ
–ಭರಮಪ್ಪ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.