ADVERTISEMENT

ರೋಣ: ಪ್ರವಾಹಪೀಡಿತ ಮಲಪ್ರಭೆಯ ಒಡಲ ಮಕ್ಕಳ ಗೋಳು ಕೇಳುವವರಾರು?

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 5:28 IST
Last Updated 23 ಜೂನ್ 2025, 5:28 IST
ಮುಳ್ಳು ಕಂಟಿಗಳು ಬೆಳೆದು ಸಂಪೂರ್ಣ ಮುಚ್ಚಿ ಹೊಗಿರುವ ಹೊಳೆಆಲೂರು ಗ್ರಾಮದ ಮನೆಗಳು
ಮುಳ್ಳು ಕಂಟಿಗಳು ಬೆಳೆದು ಸಂಪೂರ್ಣ ಮುಚ್ಚಿ ಹೊಗಿರುವ ಹೊಳೆಆಲೂರು ಗ್ರಾಮದ ಮನೆಗಳು   

ರೋಣ: 2007 ಮತ್ತು 2009ರಲ್ಲಿ ರಾಜ್ಯದಲ್ಲಿ ಸುರಿದ ಕುಂಭದ್ರೋಣ ಮಳೆಗೆ ಉತ್ತರ ಕರ್ನಾಟಕದ ಹಲವು ನದಿಗಳು ಉಕ್ಕಿ ಹರಿದವು. ಪ್ರಮುಖವಾಗಿ ಮಲಪ್ರಭೆ ರೌದ್ರಾವತಾರ ತಾಳಿ ತಾಲ್ಲೂಕಿನ ಹೊಳೆಆಲೂರು, ಹೊಳೆಮಣ್ಣೂರು, ಗಾಡಗೋಳಿ, ಅಮರಗೋಳ, ಬಿ.ಎಸ್.ಬೇಲೇರಿ, ಮೆಣಸಗಿ, ಬಸರಕೋಡ, ಕುರುವಿನಿಕೊಪ್ಪ, ಮಾಳವಾಡ, ಯಾ.ಸ.ಹಡಗಲಿ ಸೇರಿದಂತೆ ಹಲವು ಗ್ರಾಮಗಳು ಜಲಾವೃತವಾಗಿ ತೀವ್ರ ಸಂಕಷ್ಟ ಎದುರಿಸಿದ್ದವು.

ಪ್ರವಾಪೀಡಿತ ಗ್ರಾಮಗಳನ್ನು ಸ್ಥಳಾಂತರಗೊಳಿಸಲು ಅಂದಿನ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಕ್ರಮ ಕೈಗೊಂಡು ಪ್ರವಾಹಬಾಧಿತವಾಗದ ಸ್ಥಳಗಳನ್ನು ಗುರುತಿಸಿ ಅಲ್ಲಿಗೆ ಹಳ್ಳಿಗಳನ್ನು ಸ್ಥಳಾಂತರಗೊಳಿಸಲು ಕ್ರಮವಹಿಸಿದರು. ನಾಡಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನೂತನ ಗ್ರಾಮಗಳನ್ನು ನಿರ್ಮಾಣ ಮಾಡಿತು. ಸದ್ಯ ನೂತನ ಗ್ರಾಮಗಳು ನಿರ್ಮಾಣಗೊಂಡು ಎರಡು ದಶಕಗಳೇ ಕಳೆಯುತ್ತಾ ಬಂದರು ಅಲ್ಲಿನ ಸಮಸ್ಯೆಗಳು ಮಾತ್ರ ಬಗೆ ಹರಿದಿಲ್ಲ.

ಸೇವಾ ಭಾರತೀಯ ಸಹಯೋಗದಲ್ಲಿ ಹೊಳೆಆಲೂರು ನವಗ್ರಾಮ ನಿರ್ಮಾಣ ಮಾಡಿದ್ದು, ಮೂಲಸೌಲಭ್ಯಗಳ ಕೊರತೆಯಿಂದಾಗಿ ಗ್ರಾಮಸ್ಥರು ಹಳೆಯ ಗ್ರಾಮ ಬಿಟ್ಟು ಹೊಸ ಗ್ರಾಮಕ್ಕೆ ತೆರಳುತ್ತಿಲ್ಲ. ಇದರಿಂದಾಗಿ ನವಗ್ರಾಮದಾದ್ಯಂತ ಮುಳ್ಳು ಕಂಟಿಗಳು ಬೆಳೆದು ನಿರ್ಮಿಸಿದ ಮನೆಗಳು ಶಿಥಿಲಾವಸ್ಥೆ ತಲುಪಿವೆ. ಈಗಾಗಲೇ ಮನೆಗಳ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದರು ಫಲಾನುಭವಿಗಳು ಮಾತ್ರ ಮನೆಗಳನ್ನು ನೋಂದಣಿ ಮಾಡಿಕೊಳ್ಳದೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದಾಗಿ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳು ಕುಡುಕರ ತಾಣಗಳಾಗಿ ಬದಲಾಗುತ್ತಿವೆ.

ADVERTISEMENT

ಸ್ಥಳಾಂತರವಾದ ಮತ್ತೊಂದು ಗ್ರಾಮ ಬಸರಕೋಡ ಕೂಡ ಸಮಸ್ಯೆಗಳ ಆಗರವಾಗಿದ್ದು ಬೀದಿದೀಪ, ಚರಂಡಿ, ವ್ಯವಸ್ಥಿತ ರಸ್ತೆಗಳಿಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಇಲ್ಲಿನ ಫಲಾನುಭವಿಗಳಿಗೆ ತಮ್ಮ ಮನೆ ಯಾವುದು ಎಂಬುದೇ ತಿಳಿದಿಲ್ಲ. ಇದಕ್ಕೆ ಕಾರಣ ಹಕ್ಕುಪತ್ರ ವಿತರಣೆ ಆಗದಿರುವುದು. ಪ್ರತಿಬಾರಿಯೂ ಗ್ರಾಮಕ್ಕೆ ಬರುವ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಗ್ರಾಮಸ್ಥರು ದುಂಬಾಲು ಬಿದ್ದರೂ ಸಮಸ್ಯೆ ಮಾತ್ರ ಇದುವರೆಗೆ ಬಗೆಹರಿದಿಲ್ಲ.

ದನದ ಕೊಟ್ಟಿಗೆಯಾಗಿ ಬಳಕೆಯಾಗುತ್ತಿರುವ ಆಸರೆ ಮನೆಗಳು

ಮತ್ತೊಂದು ಗ್ರಾಮ ಕುರುವಿನಕೊಪ್ಪದಲ್ಲಿ ಸಮಸ್ಯೆಗಳು ವ್ಯಾಪಕವಾಗಿದ್ದು ನಿರ್ಮಿತಿ ಕೇಂದ್ರದ ಅಡಿಯಲ್ಲಿ ನಿರ್ಮಿಸಿದ ನವಗ್ರಾಮದಲ್ಲಿ ಸದ್ಯ ಗ್ರಾಮದ ಪ್ರಮುಖ ಚರಂಡಿಗಳೆಲ್ಲ ಒಡೆದು ಹೋಗಿವೆ. ಇದರಿಂದಾಗಿ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದೆ. ಆ ದಿನಗಳಲ್ಲಿ ನಿರ್ಮಿಸಿದ ಗ್ರಾಮದ ಸಿಸಿ ರಸ್ತೆಗಳು ಬಿರುಕು ಬಿಟ್ಟಿದ್ದು ಗ್ರಾಮದಲ್ಲಿ ಸಂಚರಿಸಲು ತೀವ್ರ ತೊಂದರೆಯಾಗಿದೆ. ಜತೆಗೆ ಶಾಲೆ ದೇವಸ್ಥಾನ ಸೇರಿದಂತೆ ಯಾವುದೇ ಮೂಲಸೌಕರ್ಯಗಳನ್ನು ನವಗ್ರಾಮ ಹೊಂದದೆ ಇರುವುದು ಗ್ರಾಮಸ್ಥರ ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಗಾಡಗೊಳಿ ಗ್ರಾಮದ ಆಸರೆ ಮನೆಗಳ ಶೌಚಾಲಯಗಳ ದುಸ್ಥಿ
ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು 10ರಿಂದ 15 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ನೀರು ತರುವುದೇ ಪ್ರತಿದಿನದ ದೊಡ್ಡ ಕೆಲಸವಾಗಿದೆ
–ನಾಗಪ್ಪ ಗಾಡಗೋಳಿ ಗ್ರಾಮಸ್ಥ
ವಿದ್ಯುತ್‌ ಇಲ್ಲ ಸರಿಯಾದ ರಸ್ತೆಗಳಿಲ್ಲ. ಮಳೆ ಬಂದರೆ ಗಟಾರದ ನೀರು ಮನೆಗೆ ನುಗ್ಗುತ್ತದೆ. ಹುಳು ಹುಪ್ಪಟೆ ಭಯ ಇದೆ. ಮಕ್ಕಳು ಮಹಿಳೆಯರು ಇಂತಹ ಭಯದಲ್ಲಿಯೇ ಜೀವನ ಸಾಗಿಸುವಂತಾಗಿದೆ
–ಮಲ್ಲಮ್ಮ ಆಲೂರ ಬಸರಕೋಡ ಗ್ರಾಮಸ್ಥರು

ಗಾಡಗೋಳಿ ಗ್ರಾಮದಲ್ಲಿ ನೀರಿನ ಸಮಸ್ಯೆ

ಹೋಬಳಿ ಕೇಂದ್ರವಾದ ಹೊಳೆಆಲೂರು ಪಕ್ಕದಲ್ಲಿಯೇ ಇರುವ ಗಾಡಗೋಳಿ ಗ್ರಾಮ ಕೂಡ ಸ್ಥಳಾಂತರ ಗ್ರಾಮವಾಗಿದ್ದು ಪ್ರಸ್ತುತ ಗ್ರಾಮಕ್ಕೆ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿ 12 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಈ ಭಾಗದಲ್ಲಿ ಈಗಾಗಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ ಮಾತ್ರ ಸಾಧ್ಯವಾಗುತ್ತಿಲ್ಲ. ಯಾ.ಸ.ಹಡಗಲಿ ಮತ್ತು ಮಾಳವಾಡ ನವಗ್ರಾಮಗಳಲ್ಲಿಯೂ ಇದೇ ತೆರನಾದ  ಸಮಸ್ಯೆಗಳಿದ್ದು ಸ್ಥಳೀಯಾಡಳಿತ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನತೆ ಬೇಸತ್ತಿದ್ದಾರೆ.

Cut-off box - ಮೂಲಸೌಲಭ್ಯ ಒದಗಿಸಲು ಹಿನ್ನಡೆ ಗ್ರಾಮಸ್ಥರು ಹಳೆಯ ಊರುಗಳನ್ನು ಬಿಟ್ಟು ಸ್ಥಳಾಂತರಗೊಂಡ ಗ್ರಾಮಗಳಿಗೆ ತೆರಳುತ್ತಿಲ್ಲ. ಇದರಿಂದಾಗಿ ಮೂಲಸೌಲಭ್ಯಗಳನ್ನು ಕಲ್ಪಿಸುವಲ್ಲಿ ಹಿನ್ನಡೆಯಾಗಿದೆ. ಜತೆಗೆ ಸರ್ಕಾರದಿಂದ ಯಾವುದೇ ವಿಶೇಷ ಅನುದಾನ ಸ್ಥಳಾಂತರಗೊಂಡ ಗ್ರಾಮಗಳಿಗಾಗಿ ಬಂದಿಲ್ಲ. ಹೀಗಾಗಿ ಹಳೆಯ ಮತ್ತು ನವಗ್ರಾಮ ಎರಡರಲ್ಲಿಯೂ ಮೂಲಸೌಲಭ್ಯ ಕಲ್ಪಿಸಲು ಪಂಚಾಯಿತಿ ಆಡಳಿತಕ್ಕೆ ಕಷ್ಟವಾಗುತ್ತಿದೆ–ಚಂದ್ರಶೇಖರ ಕಂದಕೂರ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ರೋಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.