ಗದಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯಕ್ಕೆ ಕಾಯಂ ಪ್ರಾಧ್ಯಾಪಕರು ಇಲ್ಲದೇ, ಪಿಎಚ್.ಡಿ ಸೇರಿ ವಿವಿಧ ಸಂಶೋಧನಾ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ.
2017-18ನೇ ಶೈಕ್ಷಣಿಕ ಸಾಲಿನಲ್ಲಿ ಸ್ಥಾಪಿತ ಈ ವಿಶ್ವವಿದ್ಯಾಲಯಕ್ಕೆ ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಾರಂಭದಿಂದಲೂ ಎಲ್ಲ ಸರ್ಕಾರಗಳು ವಿಶ್ವವಿದ್ಯಾಲಯದ ಭೌತಿಕ ಅಭಿವೃದ್ಧಿಗೆ ಬೇಕಾದ ಅನುದಾನ ನೀಡುತ್ತಿವೆ. ಆದರೆ, ಕಾಯಂ ಸಿಬ್ಬಂದಿ ನೇಮಕಾತಿಗೆ ಕ್ರಮ ವಹಿಸಿಲ್ಲ. ಇದರ ಪರಿಣಾಮ ಇಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪಿಎಚ್.ಡಿಗಾಗಿ ರಾಜ್ಯದ ಇತರೆ ವಿಶ್ವವಿದ್ಯಾಲಯಗಳನ್ನು ಅವಲಂಬಿಸಬೇಕಿದೆ.
‘ವಿಶ್ವವಿದ್ಯಾಲಯವು ಪ್ರಗತಿ ಸಾಧಿಸಲು ವಿಪುಲ ಅವಕಾಶಗಳಿವೆ. ಆದರೆ, ಪೂರಕ ಪ್ರಯತ್ನಗಳು ನಡೆದಿಲ್ಲ. ಕುಲಪತಿ ನಿವೃತ್ತರಾಗಿ ಹತ್ತು ತಿಂಗಳಾದರೂ ಹೊಸ ಕುಲಪತಿಯ ನೇಮಕ ಆಗಿಲ್ಲ. ಕಾಯಂ ಸಿಬ್ಬಂದಿ ನೇಮಕಾತಿಗೂ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ’ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.
‘ವಿಶ್ವವಿದ್ಯಾಲಯದಲ್ಲಿ ಕಾಯಂ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಇಲ್ಲ. ಅವರಿಲ್ಲದೇ ಸಂಶೋಧನಾ ಚಟುವಟಿಕೆಗೆ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಆಗದು. ಕಾಯಂ ಪ್ರಾಧ್ಯಾಪಕರು ನೇಮಕಗೊಂಡರೆ ಮಾತ್ರ ಸಂಶೋಧನಾ ಚಟುವಟಿಕೆಗಳು ನಡೆಯಲು ಸಾಧ್ಯ’ ಎಂದು ಪ್ರಭಾರ ಕುಲಪತಿ ಪ್ರೊ. ಎಸ್.ವಿ.ನಾಡಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ವಿಶ್ವವಿದ್ಯಾಲಯಕ್ಕೆ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡಲು ಸರ್ಕಾರ ಆದೇಶಿಸಿದ್ದು, ಆಡಳಿತಾತ್ಮಕವಾಗಿ ಮೂಲ ಅಧಿನಿಯಮಕ್ಕೆ ತಿದ್ದುಪಡಿಯಾದ ನಂತರ ಜಾರಿಗೆ ಬರಲಿದೆ. ವಿಶ್ವವಿದ್ಯಾಲಯದ ಅಭಿವೃದ್ಧಿ, ಕ್ರೀಡಾ ಚಟುವಟಿಕೆ, ಗ್ರಂಥಾಲಯ, ಆಡಳಿತ ಕಚೇರಿ ಕಟ್ಟಡ ನಿರ್ಮಾಣ, ರಸ್ತೆಗಳ ಕಾಮಗಾರಿ, ತರಬೇತಿ ಕೇಂದ್ರ ಸ್ಥಾಪನೆ ಸೇರಿ ಇತರೆ ಕಾರ್ಯಗಳಿಗೆ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರಲಾಗಿದೆ’ ಎಂದರು.
ವಿಶ್ವವಿದ್ಯಾಲಯದ ಬೆಳವಣಿಗೆಗೆ ಭೌತಿಕ ಸೌಲಭ್ಯಗಳ ಜತೆಗೆ ಮಾನವ ಸಂಪನ್ಮೂಲ ಅವಶ್ಯಕ. ಎಲ್ಲ ಹಂತದಲ್ಲಿ ನುರಿತ ಪ್ರಾಧ್ಯಾಪಕರು ಬೇಕು. ಕಾಯಂ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಕ್ರಮವಹಿಸಬೇಕುಪ್ರೊ. ವಿಷ್ಣುಕಾಂತ ಎಸ್.ಚಟಪಲ್ಲಿ ವಿಶ್ರಾಂತ ಕುಲಪತಿ
ವಿಶ್ವವಿದ್ಯಾಲಯದಲ್ಲಿ ಕುಲಸಚಿವರ ಜೊತೆಗೆ ನಾಲ್ಕು ಪಿಡಿಒಗಳು ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಒಬ್ಬ ಎಂಜಿನಿಯರ್ ಇದ್ದಾರೆ. ಇವರು ಹೊರತುಪಡಿಸಿದರೆ ಉಳಿದವರು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಇದ್ದಾರೆ.ಪ್ರೊ. ಎಸ್.ವಿ.ನಾಡಗೌಡರ ಪ್ರಭಾರ ಕುಲಪತಿ
Quote -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.