
ಗದಗ: ಗ್ರಾಮೀಣ ಸಬಲೀಕರಣ ಮತ್ತು ಶಾಶ್ವತ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಉದ್ದೇಶದಿಂದ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ಹಾಗೂ ಸರ್ವೋದಯ ಇಂಟಿಗ್ರೇಟೆಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ನಡುವೆ ಪರಸ್ಪರ ಸಹಯೋಗ ಒಪ್ಪಂದಕ್ಕೆ (ಎಂಒಯು) ಸಹಿ ಮಾಡಲಾಯಿತು.
ಗ್ರಾಮೀಣಾಭಿವೃದ್ಧಿ ವಿ.ವಿಯ ಪ್ರಭಾರ ಕುಲಪತಿ ಪ್ರೊ.ಸುರೇಶ ವಿ.ನಾಡಗೌಡರ ಮಾತನಾಡಿ, ‘ವಿದ್ಯಾರ್ಥಿಗಳು ಗ್ರಾಮೀಣ ಭಾಗದ ವಾಸ್ತವ್ಯ ಅರಿತು, ಸಮಾಜಮುಖಿ ಸಂಶೋಧನೆ ಮತ್ತು ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಈ ಸಹಯೋಗ ಪ್ರೇರಕವಾಗಲಿದೆ’ ಎಂದು ಹೇಳಿದರು.
‘ಶೈಕ್ಷಣಿಕ, ತರಬೇತಿ, ಸಂಶೋಧನೆ, ನವೀನತೆ, ಉದ್ಯಮಶೀಲತೆ, ಸಾರ್ವಜನಿಕ ನೀತಿ, ಸಮುದಾಯ ಅಭಿವೃದ್ಧಿ ಹಾಗೂ ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಂಟಿ ಸಹಯೋಗದ ಮೂಲಕ ಜ್ಞಾನ ವಿಸ್ತರಣೆ ಮತ್ತು ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು’ ಎಂದರು.
‘ಜತೆಗೆ ಜಂಟಿ ಸಮ್ಮೇಳನಗಳು, ಕಾರ್ಯಾಗಾರಗಳು, ವಿದ್ಯಾರ್ಥಿ–ಅಧ್ಯಾಪಕರ ವಿನಿಮಯ ಕಾರ್ಯಕ್ರಮ, ಮಾನವ ಸಂಪನ್ಮೂಲ ವೃದ್ಧಿ, ಜ್ಞಾನ ಸಂಪನ್ಮೂಲ ಹಂಚಿಕೆ ಹಾಗೂ ಸರ್ಕಾರದ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಈ ಒಪ್ಪಂದದ ಪ್ರಮುಖ ಉದ್ದೇಶಗಳಾಗಿವೆ. ಈ ಮೂಲಕ ಗ್ರಾಮೀಣ ಸಮಾಜದ ಸರ್ವತೋಮುಖ ಪ್ರಗತಿಗೆ ಪೂರಕವಾದ ಮಾನವ ಸಂಪನ್ಮೂಲ ಸೃಷ್ಟಿಯಾಗಲಿದೆ’ ಎಂದು ತಿಳಿಸಿದರು.
ಸರ್ವೋದಯ ಇಂಟಿಗ್ರೇಟೆಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ನಾಗರಾಜ್ ದೇಸಾಯಿ ಮತ್ತು ದೀಪಾ ಸುನಿಲ್ ಮಾತನಾಡಿ, ‘ವಿಶ್ವವಿದ್ಯಾಲಯ ಮತ್ತು ಎನ್‌ಜಿಒ ಸಹಯೋಗ ಗ್ರಾಮೀಣ ಪರಿವರ್ತನೆಗೆ ದಾರಿತೋರುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಂಶೋಧನೆ ಮತ್ತು ಅನ್ವೇಷಣಾ ವಿಭಾಗದ ಸಹಾಯಕ ನಿರ್ದೇಶಕ ಪ್ರೊ. ಗಿರೀಶ್ ದೀಕ್ಷಿತ್, ಆಡಳಿತಾಧಿಕಾರಿ ಶಶಿಭೂಷಣ ದೇವೂರ, ಮೃತ್ಯುಂಜಯ ಮೆಣಸಿನಕಾಯಿ, ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ಸರ್ವೋದಯ ಇಂಟಿಗ್ರೇಟೆಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.