ADVERTISEMENT

‘ಸೋಂಕು ಹೆಚ್ಚಿದರೆ ಹೆಚ್ಚುವರಿ ಸೌಲಭ್ಯ ಅಗತ್ಯ’

ಜಿಮ್ಸ್ ಮುಖ್ಯಸ್ಥರೊಂದಿಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸಮಾಲೋಚನಾ ಸಭೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 5:32 IST
Last Updated 29 ಏಪ್ರಿಲ್ 2021, 5:32 IST
ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಜಿಮ್ಸ್‌ ವೈದ್ಯಾಧಿಕಾರಿಗಳ ಜತೆಗೆ ಬುಧವಾರ ಸಮಾಲೋಚನಾ ಸಭೆ ನಡೆಸಿದರು
ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಜಿಮ್ಸ್‌ ವೈದ್ಯಾಧಿಕಾರಿಗಳ ಜತೆಗೆ ಬುಧವಾರ ಸಮಾಲೋಚನಾ ಸಭೆ ನಡೆಸಿದರು   

ಗದಗ: ತಜ್ಞರು ಹಾಗೂ ಐಐಎಸ್‌ಸಿ ವಿಜ್ಞಾನಿಗಳ ಅಧ್ಯಯನದ ವರದಿಯಂತೆ ಮೇ ಕೊನೆಯ ವಾರ ಅಥವಾ ಜೂನ್ ಮೊದಲನೇ ವಾರದಲ್ಲಿ ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ, ವೈದ್ಯಕೀಯ ಅಧೀಕ್ಷಕರು, ಪ್ರಾಂಶುಪಾಲರು ಹಾಗೂ
ವೈದ್ಯಾಧಿಕಾರಿಗಳ ಜತೆಗೆ ಬುಧವಾರ ಸಮಾಲೋಚನಾ ಸಭೆ ನಡೆಸಿದರು.

ಜಿಮ್ಸ್ ನಿರ್ದೇಶಕ ಡಾ. ಪಿ.ಎಸ್.ಭೂಸರೆಡ್ಡಿ ಮಾತನಾಡಿ, ‘ಸದ್ಯದ ಪರಿಸ್ಥಿತಿಯಲ್ಲಿ ಸೋಂಕಿತರಿಗೆ ಬೆಡ್‍ಗಳು, ಆಕ್ಸಿಜನ್ ಹಾಗೂ ರೆಮ್‍ಡಿಸಿವಿರ್ ಕೊರತೆ ಇಲ್ಲ. ಆದರೆ, ಜಿಲ್ಲೆಯಲ್ಲಿ ಮುಂದೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ರೋಗಿಗಳಿಗೆ ಸಮರ್ಪಕವಾಗಿ ಆಕ್ಸಿಜನ್ ಒದಗಿಸಲು ಹೆಚ್ಚುವರಿಯಾಗಿ 20 ಕೆ.ಎಲ್. ಸಾಮರ್ಥ್ಯವುಳ್ಳ ಆಕ್ಸಿಜನ್ ಸಂಗ್ರಹಿಸುವ ಘಟಕ ಬೇಕಾಗುವುದು’ ಎಂದು ಹೇಳಿದರು.

‘ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರ ಜಿಮ್ಸ್‌ಗೆ ವೇತನ ಹೊರತುಪಡಿಸಿ
ಕೊಡುವ ₹17 ಕೋಟಿ ವಾರ್ಷಿಕ ಅನುದಾನ ಸಾಕಾಗುವುದಿಲ್ಲ. ಕನಿಷ್ಠ ₹30 ಕೋಟಿ ಅನುದಾನ ಬೇಕು’ ಎಂದು ತಿಳಿಸಿದರು.

ADVERTISEMENT

ಜಿಮ್ಸ್‌ನಲ್ಲಿ ಶಿಸ್ತು ಹಾಗೂ ಶಾಂತಿ ಪಾಲನೆಗಾಗಿ ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಯ ಅವಶ್ಯಕತೆ ಇದೆ. ಜಿಮ್ಸ್‌ನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಬೆಟಗೇರಿಯಿಂದ ಜಿಮ್ಸ್ ಸಂಸ್ಥೆಯವರೆಗೆ ಪ್ರತಿದಿನ ಬೆಳಿಗ್ಗೆ 7, ಮಧ್ಯಾಹ್ನ 1 ಹಾಗೂ ಸಂಜೆ 7ಕ್ಕೆ ಜಿಲ್ಲಾಡಳಿತದ ವತಿಯಿಂದ
ಬಸ್‌ ವ್ಯವಸ್ಥೆ ಮಾಡಬೇಕು ಎಂದು ವಿವಿಧ ವಿಭಾಗಗಳ ಮುಖ್ಯಸ್ಥರು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಇದಕ್ಕೆ ಪ್ರತಿಕ್ರಿಯಿಸಿ, ಬೇಡಿಕೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ
ಅವರ ಗಮನಕ್ಕೆ ತರುವುದಾಗಿ ತಿಳಿಸಿದರು.

ಪ್ರಾಂಶುಪಾಲ ಡಾ. ರಾಜು ಗವಳಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಜಿ.ಎಸ್.ಪಲ್ಲೇದ, ವೈದ್ಯಕೀಯ ಅಧೀಕ್ಷಕ ರಾಜಶೇಖರ ಮ್ಯಾಗೇರಿ, ನೋಡಲ್ ಆಫೀಸರ್ ಸೋಮಶೇಖರ ಬಿಜ್ಜಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.