
ಗದಗ: ‘ಶಾಲೆಗಳು ಸಮಾಜದ ಒಂದು ಭಾಗ. ಪೋಷಕರ ವಿಶ್ವಾಸ ಹಾಗೂ ಸಹಕಾರವು ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯುತ್ತದೆ. ಹೀಗಾಗಿ ಸಮುದಾಯದ ಸಹಭಾಗಿತ್ವದೊಂದಿಗೆ ಪೋಷಕರು– ಶಿಕ್ಷಕರ ಮಹಾಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಡಿಡಿಪಿಐ ಆರ್.ಎಸ್.ಬುರಡಿ ಹೇಳಿದರು.
ಗದಗ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪೋಷಕರು– ಶಿಕ್ಷಕರ ಮಹಾಸಭೆಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
‘ನ14ರಂದು ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಹಾಸಭೆ ನಡೆಯಲಿದ್ದು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ.ಶೆಟ್ಟಪ್ಪನವರ ಮಾತನಾಡಿ, ‘ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ ಸಮವಸ್ತ್ರ ವಿತರಣೆ, ಉಚಿತ ಆರೋಗ್ಯ ತಪಾಸಣೆ ಜತೆಗೆ ಪೂರಕ ಪೌಷ್ಟಿಕ ಆಹಾರ ವಿತರಣೆ ಎಲ್ಲವೂ ಇಲಾಖೆಯ ನಿಯಮಾನುಸಾರ ಉಚಿತವಾಗಿ ವಿತರಿಸಲಾಗುತ್ತಿದೆ. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು’ ಎಂದರು.
ಗದಗ ಶಹರ ವಲಯದ ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಪಿ.ಪ್ರಭಯ್ಯನಮಠ, ಎಪಿಸಿಒ ಶಿವಕುಮಾರ್ ಕುರಿ, ಎಸ್.ಕೆ.ಮಂಗಳಗುಡ್ಡ, ಪ್ರಶಾಂತ ಕನಾಜ, ಸಂಪನ್ಮೂಲ ವ್ಯಕ್ತಿಗಳಾದ ಐ.ಬಿ.ಮಡಿವಾಳರ, ಕವಿತಾ ಬೇಲೇರಿ, ವಿದ್ಯಾ ಗದ್ದಾಳೆ ಇದ್ದರು.
ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೇ ನಮ್ಮೆಲ್ಲರ ಗುರಿಯಾಗಿದೆ. ಪಾಲಕರ ಸಹಭಾಗಿತ್ವ ಸರ್ಕಾರಿ ಶಾಲೆಗಳ ಬೆಳೆವಣಿಗೆಗೆ ಸ್ಫೂರ್ತಿದಾಯಕ.–ರವಿಪ್ರಕಾಶ್ ಜಿಲ್ಲಾ ಯೋಜನಾ ಉಪ ನಿರ್ದೇಶಕ
ಶಾಲೆಗಳು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ವೈಯುಕ್ತಿಕ ಗಮನದೊಂದಿಗೆ ಸರ್ಕಾರಿ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ–ವಿ.ವಿ.ನಡುವಿನಮನಿ ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.