ADVERTISEMENT

ಮಕ್ಕಳ ಸುರಕ್ಷತೆಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಅವಶ್ಯ

ಜಿಲ್ಲೆಯ ಖಾಸಗಿ, ಅನುದಾನಿತ ಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷರು, ಮುಖ್ಯಶಿಕ್ಷಕರ ಸಭೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 2:47 IST
Last Updated 23 ಡಿಸೆಂಬರ್ 2025, 2:47 IST
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಮಾತನಾಡಿದರು
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಮಾತನಾಡಿದರು   

ಗದಗ: ‘ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಯೇ ಶಿಕ್ಷಣ ಸಂಸ್ಥೆಗಳ ಪ್ರಥಮ ಆದ್ಯತೆಯಾಗಿರಬೇಕು’ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ನಿರ್ದೇಶಿಸಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜಿಲ್ಲೆಯ ಖಾಸಗಿ, ಅನುದಾನಿತ ಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಮುಖ್ಯೋಪಾಧ್ಯಾಯರ ಜತೆಗಿನ ಸಭೆಯಲ್ಲಿ ಮಾತನಾಡಿದರು.

‘ಶಾಲಾ ವಾಹನಗಳು ಹಾಗೂ ಶಾಲಾ ವಾತಾವರಣ ಸರ್ಕಾರದ ನಿಯಮಾವಳಿಗಳಂತೆ ಸಂಪೂರ್ಣವಾಗಿ ಸುರಕ್ಷಿತವಾಗಿರಬೇಕು. ಪ್ರತಿಯೊಂದು ಶಾಲಾ ಬಸ್‌ಗಳಲ್ಲಿ ಅಗತ್ಯ ದಾಖಲೆಗಳು, ವಾಹನದ ತಾಂತ್ರಿಕ ಸ್ಥಿತಿ, ನಿಯಮಿತ ಫಿಟ್ನೆಸ್ ಪ್ರಮಾಣಪತ್ರ, ವೇಗ ನಿಯಂತ್ರಕ ಸಾಧನ, ಅಗ್ನಿಶಾಮಕ ಉಪಕರಣಗಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ತುರ್ತು ನಿರ್ಗಮನ ವ್ಯವಸ್ಥೆ ಕಡ್ಡಾಯವಾಗಿರಬೇಕು’ ಎಂದು ಸೂಚಿಸಿದರು.

ADVERTISEMENT

ಶಾಲಾ ಬಸ್‌ಗಳಲ್ಲಿ ಅಟೆಂಡರ್ ನೇಮಕ ಕಡ್ಡಾಯವಾಗಿದ್ದು, ಮಕ್ಕಳು ಏರುವ-ಇಳಿಯುವ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅತಿವೇಗ, ಮದ್ಯಪಾನ ಮಾಡಿ ಚಾಲನೆ ಅಥವಾ ನಿರ್ಲಕ್ಷ್ಯಕ್ಕೆ ಆಸ್ಪದವಿಲ್ಲ ಎಂದು ಎಚ್ಚರಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ‘ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಜಿಪಿಎಸ್ ವ್ಯವಸ್ಥೆ ಹಾಗೂ ಪೋಷಕರಿಗೆ ಮಾಹಿತಿ ನೀಡುವ ತಂತ್ರಜ್ಞಾನ ಬಳಕೆಗೆ ಒತ್ತು ನೀಡಬೇಕು ಎಂದರು.

ಆಟೊಗಳಲ್ಲಿ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಸಂದರ್ಭದಲ್ಲಿ ಆಟೊ ಚಾಲಕರು ನಿಗದಿತ ಸಂಖ್ಯೆಗಿಂತ ಅಧಿಕ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಸುರಕ್ಷತೆಗೆ ಕ್ರಮ ವಹಿಸಿ ನಿಧಾನವಾಗಿ ಮಕ್ಕಳನ್ನು ಶಾಲೆಗಳಿಗೆ ತಲುಪಿಸುವ ಹಾಗೂ ಮನೆಗೆ ಕರೆದೊಯ್ಯುವ ಜವಾಬ್ದಾರಿ ವಾಹನ ಚಾಲಕರದ್ದಾಗಿರುತ್ತದೆ ಎಂದು ತಿಳಿಸಿದರು.

ಕನಕದಾಸ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರವಿ ದಂಡಿನ ಮಾತನಾಡಿ, ‘ಶಿಕ್ಷಣ ಸಂಸ್ಥೆಗಳಲ್ಲಿನ ಶಾಲಾ ವಾಹನಗಳ ಸಂಪೂರ್ಣ ಸುರಕ್ಷತೆಗೆ ಪ್ರಥಮಾದ್ಯತೆ ನೀಡಬೇಕಿದೆ. ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ ವರ್ತನೆ ಸಹಿಸಲಾಗದು. ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಸಂಸ್ಥೆಯಲ್ಲಿನ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು’ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ್‌ ಅವರು ಮಕ್ಕಳ ಸುರಕ್ಷಿತ ಸಾರಿಗೆ ಹಾಗೂ ಶಾಲಾ ವಾತಾವರಣದಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳು ನಡೆಯುವಂತೆ ಕುರಿತು ಶಾಲಾ ಸಂಸ್ಥೆಯ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯವರು ವಹಿಸಬೇಕಾದ ಕ್ರಮಗಳ ಕುರಿತು ತಿಳಿಸಿಕೊಟ್ಟರು.

ಸಭೆಯಲ್ಲಿ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಿಆರ್‌ಪಿಗಳು, ಪ್ರೊ.ಕೆ.ಎಚ್.ಬೇಲೂರ, ಎಸ್.ಪಿ.ಬಳಿಗಾರ, ಎಂ.ಕೆ.ಲಮಾಣಿ, ಎ.ಎಸ್.ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.