ADVERTISEMENT

‘ಬಿಟ್ಟಿ ಚಾಕ್ರಿ’ ಶಿಕ್ಷಾರ್ಹ ಅಪರಾಧ: ಡಾ. ಕಿರಣ್‌ ಕುಮಾರ್‌ ಪ್ರಸಾದ್‌

ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯಿಂದ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 5:25 IST
Last Updated 16 ಜುಲೈ 2021, 5:25 IST
‘ಬಿಟ್ಟಿ ಚಾಕ್ರಿ’ಯಲ್ಲಿ ತೊಡಗಿರುವವರಿಗೆ ಪುನರ್ವಸತಿ ಕಲ್ಪಿಸುವುದು ಸೇರಿದಂತೆ ವಿವಿಧ ಸೌಲಭ್ಯ ದೊರಕಿಸಿಕೊಡುವಂತೆ ಆಗ್ರಹಿಸಿ ಜೀವಿಕ ಸಂಘಟನೆ ಮುಖ್ಯಸ್ಥರು ಗದಗ ತಹಶೀಲ್ದಾರ್‌ ಕಿಶನ್‌ ಕಲಾಲ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು
‘ಬಿಟ್ಟಿ ಚಾಕ್ರಿ’ಯಲ್ಲಿ ತೊಡಗಿರುವವರಿಗೆ ಪುನರ್ವಸತಿ ಕಲ್ಪಿಸುವುದು ಸೇರಿದಂತೆ ವಿವಿಧ ಸೌಲಭ್ಯ ದೊರಕಿಸಿಕೊಡುವಂತೆ ಆಗ್ರಹಿಸಿ ಜೀವಿಕ ಸಂಘಟನೆ ಮುಖ್ಯಸ್ಥರು ಗದಗ ತಹಶೀಲ್ದಾರ್‌ ಕಿಶನ್‌ ಕಲಾಲ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು   

ಗದಗ: ‘ಬಿಟ್ಟಿ ಚಾಕ್ರಿ ಮಾಡಿಸಿಕೊಳ್ಳುವುದು ಕೂಡ ಜೀತಪದ್ಧತಿಯ ಒಂದು ಸ್ವರೂಪ. ಇದು ಶಿಕ್ಷಾರ್ಹ ಅಪರಾಧ’ ಎಂದು ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಅಧ್ಯಕ್ಷ ಡಾ. ಕಿರಣ್‌ ಕುಮಾರ್‌ ಪ್ರಸಾದ್‌ ಹೇಳಿದರು.

ನಗರದ ಬಾಬುಜಗಜೀವನ್‌ ರಾಮ್‌ ಸಭಾ ಭವನದಲ್ಲಿ ಗುರುವಾರ ನಡೆದ ‘ಬಿಟ್ಟಿ ಚಾಕ್ರಿ’ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ ಹಾಗೂ ಸ್ವಾತಂತ್ರ್ಯದ ಹಕ್ಕನ್ನು ಸಂವಿಧಾನ ನಮ್ಮ ಹುಟ್ಟಿನಿಂದಲೇ ಕಲ್ಪಿಸಿಕೊಟ್ಟಿದೆ. ಆದರೆ ಜೀತ ಪದ್ಧತಿ, ದೇವದಾಸಿ ಹಾಗೂಬಿಟ್ಟಿ ಚಾಕ್ರಿಯಂತಹ ಆಚರಣೆಗಳು ಸಂವಿಧಾನದ ಆಶಯಕ್ಕೆ ಭಂಗ ತರುತ್ತಿವೆ. ಇವುಗಳಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ನಮ್ಮ ಸಂವಿಧಾನದ ಪೀಠಿಕೆಯ ಆಶಯಗಳು ಜಾರಿಯಾಗಬೇಕಾದರೆ ಇವು ಬುಡಸಮೇತ ನಿರ್ಮೂಲನೆ ಆಗಬೇಕು. ಬಿಟ್ಟಿ ಚಾಕ್ರಿಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಪುನರ್ವಸತಿ ಕಲ್ಪಿಸಿಕೊಡಲು ಸರ್ಕಾರ ಕ್ರಮವಹಿಸಬೇಕು‌’ ಎಂದು ಆಗ್ರಹಿಸಿದರು.

ADVERTISEMENT

ದಲಿತ ಮುಖಂಡ ಎಸ್‌.ಎನ್‌.ಬಳ್ಳಾರಿ ಮಾತನಾಡಿ, ‘ಬಿಟ್ಟಿ ಚಾಕ್ರಿ ಬಹಳ ಕೆಟ್ಟದ್ದು. ಹಿಡಿ ಜೋಳ ಕೊಟ್ಟು ಜೀವನಪೂರ್ತಿ ದುಡಿಸಿಕೊಳ್ಳುವುದು ಅಮಾನವೀಯ. ಹಿಂದೆ ಜೀತಗಾರರ ಮಕ್ಕಳು ಕೂಡ ಜೀತಗಾರರೇ ಆಗುತ್ತಿದ್ದರು. ಇಂತಹ ಶೋಷಣೆಗೆ ಒಳಗಾದವರಲ್ಲಿ ಹೆಚ್ಚಿನವರು ಪರಿಶಿಷ್ಟರು, ತಳಸಮುದಾಯದ ಜನರು. ಈಗ ಕಾಲ ಬದಲಾಗಿದೆ. ಎಲ್ಲರೂ ಶಿಕ್ಷಣ ಪಡೆಯುವ ಮೂಲಕ ಬದುಕಿನಲ್ಲಿ ಬದಲಾವಣೆ ಕಾಣಬೇಕು. ಅಂಬೇಡ್ಕರ್‌ ತತ್ವಾದರ್ಶಗಳ ಮೂಲಕ ಬದುಕು ಬೆಳಕಾಗಿಸಿಕೊಳ್ಳಬೇಕು’ ಎಂದು ಹೇಳಿದರು.

‘ದೇವರು, ಮೌಢ್ಯಗಳ ಹೆಸರಿನಲ್ಲಿ ಪರಿಶಿಷ್ಟರು, ಬಲಹೀನರ ಮೇಲೆ ಹಿಂದಿನಿಂದಲೂ ಸಾಕಷ್ಟು ಶೋಷಣೆ‌ಗಳು ನಡೆಯುತ್ತಲೇ ಬಂದಿವೆ. ಈಗಲೂ ಅದನ್ನು ಮುಂದುವರಿಸಲು ಅವಕಾಶ ನೀಡಬಾರದು’ ಎಂದು ಹೇಳಿದರು.

ವಿನಾಯಕ ಬಳ್ಳಾರಿ ಮಾತನಾಡಿದರು. ಜಾಗೃತಿ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯಲ್ಲಿ ಬಿಟ್ಟಿ ಚಾಕ್ರಿ ಮಾಡುತ್ತಿರುವ 262 ಮಂದಿ ಪೈಕಿ ಸುಮಾರು 100 ಜನರು ಭಾಗವಹಿಸಿದ್ದರು.

ಬಿಟ್ಟಿ ಚಾಕ್ರಿ ಎಂದರೇನು?

ಜಮೀನ್ದಾರರ ಮನೆಯಲ್ಲಿ ತಳ ಸಮುದಾಯದ ಜನರು ಪ್ರತಿನಿತ್ಯ ಒಂದು ಅಥವಾ ಎರಡು ತಾಸು ದನದ ಕೊಟ್ಟಿಗೆ ಸ್ವಚ್ಛಗೊಳಿಸುವುದು, ಯಜಮಾನರು ಸೂಚಿಸುವ ಕೆಲಸವನ್ನು ಮಾಡುವುದಕ್ಕೆ ಜೀವಿಕ ಸಂಘಟನೆಯವರು ‘ಬಿಟ್ಟಿ ಚಾಕ್ರಿ’ ಎಂಬ ವ್ಯಾಖ್ಯಾನ ನೀಡಿದ್ದಾರೆ.

‘ನಮ್ಮ ಮನೆಯ ಹೆಣ್ಣುಮಕ್ಕಳು ಧಣಿಗಳ ಮನೆಗೆ ಹೋಗಿ ನಿತ್ಯವೂ ಕೊಟ್ಟಿಗೆ ಸ್ವಚ್ಛಗೊಳಿಸುತ್ತಾರೆ. ಇದಕ್ಕೆ ಸಂಬಳ ಕೊಡುವುದಿಲ್ಲ. ವರ್ಷದ ಕೊನೆಯಲ್ಲಿ ಜೋಳ ಕೊಡುತ್ತಾರೆ. ಕೂಲಿ ಕೆಲಸಕ್ಕೆ ಹೋದರೆ ಹೆಣ್ಣಾಳಿಗೆ ₹200, ಗಂಡಾಳಿಗೆ ₹300 ಕೊಡುತ್ತಾರೆ’ ಎಂದು ಅಸುಂಡಿ ಗ್ರಾಮದ ವ್ಯಕ್ತಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.