ADVERTISEMENT

ಗಜೇಂದ್ರಗಡ: ಲಕ್ಷಾಂತರ ರೂಪಾಯಿ ಆದಾಯ ತಂದ ರೇಷ್ಮೆ ಕೃಷಿ

ರೇಷ್ಮೆ ಕೃಷಿಗೆ ಪೂರಕವಾಗಿರುವ ವಾತಾವರಣ; ವಾರ್ಷಿಕ ₹10 ಲಕ್ಷ ಲಾಭ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 5:03 IST
Last Updated 11 ಜುಲೈ 2025, 5:03 IST
<div class="paragraphs"><p>ಗಜೇಂದ್ರಗಡ ಸಮೀಪದ ಮ್ಯಾಕಲಝರಿ ಗ್ರಾಮದ ರೇಷ್ಮೆ ಕೃಷಿಯಲ್ಲಿ ಯಶ ಕಂಡಿರುವ ರೈತ ಶರಣಪ್ಪ ಕಟಿಗಾಲ</p></div>

ಗಜೇಂದ್ರಗಡ ಸಮೀಪದ ಮ್ಯಾಕಲಝರಿ ಗ್ರಾಮದ ರೇಷ್ಮೆ ಕೃಷಿಯಲ್ಲಿ ಯಶ ಕಂಡಿರುವ ರೈತ ಶರಣಪ್ಪ ಕಟಿಗಾಲ

   

ಗಜೇಂದ್ರಗಡ: ತಾಲ್ಲೂಕಿನ ಹಲವು ರೈತರು ರೇಷ್ಮೆ ಕೃಷಿಯಲ್ಲಿ ಯಶಸ್ಸು ಸಾಧಿಸಿ ಆರ್ಥಿಕ ಲಾಭದ ಜೊತೆಗೆ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಅಂತವರ ಪೈಕಿ ಮ್ಯಾಕಲಝರಿ ಗ್ರಾಮದ ಕಟಿಗಾಲ ಸಹೋದರರು ಕೂಡ ಸೇರಿದ್ದಾರೆ.

ಶರಣಪ್ಪ ಕಟಿಗಾಲ ಹಾಗೂ ಉಮೇಶ ಕಟಿಗಾಲ ಸಹೋದರರಿಗೆ ಗ್ರಾಮದಲ್ಲಿ 8 ಎಕರೆ ಜಮೀನಿದೆ. ಒಂದು ಕೊಳವೆಬಾವಿಯಿಂದ ಲಭ್ಯವಾಗುವ 2.5 ಇಂಚು ನೀರಿನಲ್ಲಿ 4 ಎಕರೆಯಲ್ಲಿ ಹಿಪ್ಪು ನೇರಳೆ ಬೆಳೆದು ಕಳೆದ 8 ವರ್ಷಗಳಿಂದ ರೇಷ್ಮೆ ಕೃಷಿ ಮಾಡುತ್ತಿದ್ದಾರೆ.

ADVERTISEMENT

ವರ್ಷದಲ್ಲಿ ಸುಮಾರು 9-10 ಫಸಲು ಪಡೆಯುತ್ತಿದ್ದು, ರಾಮದುರ್ಗದಿಂದ ಪ್ರತಿ ಬಾರಿ 250 ಲಿಂಕ್ಸ್‌ ತರುತ್ತಿದ್ದಾರೆ. ಪ್ರತಿ ಬಾರಿ 2ರಿಂದ 2.50 ಕ್ವಿಂಟಲ್‌ ಇಳುವರಿಗೆ ಬರುತ್ತಿದ್ದು, ಪ್ರತಿ ಇಳುವರಿಗೆ ಖರ್ಚು ಕಳೆದು ₹1 ಲಕ್ಷ ಲಾಭ ಬರುತ್ತದೆ. ಕಟಿಗಾಲ ಸಹೋದರರು ರೇಷ್ಮೆ ಕೃಷಿಯಿಂದ ವಾರ್ಷಿಕವಾಗಿ ₹9 ಲಕ್ಷದಿಂದ ₹10 ಲಕ್ಷ ಲಾಭ ಗಳಿಸುತ್ತಿದ್ದಾರೆ.

ಶರಣಪ್ಪ ಕಟಗಾಲ ಅವರಿಗೆ 2019ರಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಲಭಿಸಿದೆ. ರೇಷ್ಮೆ ಕೃಷಿಯಲ್ಲಿ ಶರಣಪ್ಪ ಕಟಿಗಾಲ ಅವರ ಅಣ್ಣ ಉಮೇಶ ಕಟಿಗಾಲ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ.

ರೇಷ್ಮೆ ಇಲಾಖೆಯಿಂದ ರೈತರಿಗೆ ಸೌಲಭ್ಯ: ಗಜೇಂದ್ರಗಡ ತಾಲ್ಲೂಕಿನಲ್ಲಿ 560 ಎಕರೆ ಪ್ರದೇಶದಲ್ಲಿ 280 ಮಂದಿ ರೈತರು ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಇಲಾಖೆಯಿಂದ ಹಿಪ್ಪು ನೇರಳೆ ನಾಟಿ ಮಾಡಲು ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಎಕರೆಗೆ ₹40 ಸಾವಿರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ₹55 ಸಾವಿರ ಸಹಾಯಧನ ಲಭ್ಯವಿದೆ.

ರೇಷ್ಮೆ ಮನೆ ನಿರ್ಮಾಣಕ್ಕೆ ಸಾಮಾನ್ಯ ವರ್ಗದ ರೈತರಿಗೆ 20X30 ಅಳತೆ ಮನೆಗೆ ₹2.43 ಲಕ್ಷ, 20X50 ಅಳತೆ ಮನೆಗೆ ₹3.37ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ 20X30 ಅಳತೆ ಮನೆಗೆ ₹3 ಲಕ್ಷ, 20X50 ಅಳತೆ ಮನೆಗೆ ₹4.05 ಲಕ್ಷ ಹಾಗೂ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಸಾಮಾನ್ಯ ವರ್ಗದ ರೈತರಿಗೆ ₹1 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ₹1.20 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಪ್ರತಿ ಕೆ.ಜಿ  ರೇಷ್ಮೆಗೂಡಿಗೆ ₹30 ಪ್ರೋತ್ಸಾಹಧನ ಸಿಗುತ್ತಿದೆ ಎನ್ನುತ್ತಾರೆ ಕಟಿಗಾಲ ಸಹೋದರರು. 

‘ಗಜೇಂದ್ರಗಡ ತಾಲ್ಲೂಕಿನಲ್ಲಿ ರೇಷ್ಮೆ ಬೆಳೆಗಾರರು ಉತ್ತಮ ರೀತಿಯಲ್ಲಿ ಇಳುವರಿ ಪಡೆಯುವ ಮೂಲಕ ಆರ್ಥಿಕ ಲಾಭ ಗಳಿಸುವುದರ ಜತೆಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಬಹಳಷ್ಟು ನಿರುದ್ಯೋಗಿ ಯುವಕರು ರೇಷ್ಮೆ ಕೃಷಿಯಲ್ಲಿ ತೊಡಗಿದ್ದು, ನಿರುದ್ಯೋಗಿ ಯುವಕರಿಗೆ ರೇಷ್ಮೆ ಕೃಷಿ ಪೂರಕವಾಗಿದೆ’ ಎಂದು ಗಜೇಂದ್ರಗಡ ತಾಲ್ಲೂಕು ರೇಷ್ಮೆ ನಿರೀಕ್ಷಕ ಸುರೇಶ ಡಣಾಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.