
ಪ್ರಜಾವಾಣಿ ವಾರ್ತೆ
ರೋಣ: ಪಟ್ಟಣದ ಶಿವಾನಂದ ಮಠದ ಲಿಂ.ಪಂಡಿತ ಬಸವರಾಜೇಂದ್ರ ಸ್ವಾಮೀಜಿ 74ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಭಾನುವಾರ ವಿಜೃಂಭಣೆಯ ರಥೋತ್ಸವ ಜರುಗಿತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಮಠದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಯಿತು. ಮಠದ ಗದ್ದುಗೆಗೆ ಅಭಿಷೇಕ ಪೂಜೆ ನೆರವೇರಿಸಲಾಯಿತು. ಭಕ್ತರಿಂದ ಮಠದ ಪೀಠಾಧಿಪತಿಗಳಾದ ಶ್ರವಣಕುಮಾರ ಸ್ವಾಮೀಜಿ ತುಲಾಭಾರ ಜರುಗಿತು. ನಂತರ ಮಠದಿಂದ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಸಂಜೆ 3ಗಂಟೆಗೆ ಮಠದ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ವಟಾರಗಳಲ್ಲಿ ಸಂಚರಿಸಿ ಮಠದ ಆವರಣ ತಲುಪಿತು.
ಸಂಜೆ ರಥೋತ್ಸವ ನೆರವೇರಿತು. ರೋಣ ಪಟ್ಟಣ, ಕೊತಬಾಳ, ಮುದೇನಗುಡಿ, ಹುಲ್ಲೂರು, ಜಿಗಳೂರು, ಹೊಸಳ್ಳಿ, ಮುಗಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರು ಆಗಮಿಸಿದ್ದರು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸತತ ಐದು ದಿನಗಳವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.