ಪ್ರಜಾವಾಣಿ ವಾರ್ತೆ
ಗದಗ: ‘ಜಗತ್ತಿನಲ್ಲಿ ತಾಯಿಗಿಂತ ಮಿಗಿಲಾದವರು ಯಾರೂ ಇಲ್ಲ. ತಾಯಿ ದೇವರಿಗಿಂತಲೂ ಶ್ರೇಷ್ಠ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಈಚೆಗೆ ನಡೆದ 2,745ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ತಾಯಿಗೆ ಮಾತೃದೇವೂಭವ ಎನ್ನುತ್ತೇವೆ. ತಾಯಿಯನ್ನು ಪ್ರತಿಯೊಬ್ಬರೂ ಸಂತೋಷದಿಂದ ನೋಡಿಕೊಳ್ಳಬೇಕು. ತಾಯಿಯೆಂದರೆ ಭೂಮಿಯ ರೂಪ. ಆಕೆ ಭೂಮಿಯಷ್ಟೇ ಸಹನೆ, ತಾಳ್ಮೆ ಕರುಣೆ ಉಳ್ಳವಳು. ತಾಯಿಯ ಪ್ರೀತಿಯನ್ನು ಅಳೆಯಲು ಸಾಧ್ಯವಿಲ್ಲ’ ಎಂದು ಬಣ್ಣಿಸಿದರು.
ಶಿರಹಟ್ಟಿಯ ಎಫ್.ಎಂ.ಡಬಾಲಿ ಕಾಲೇಜಿನ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ‘ತಾಯಿ ಮತ್ತು ಸಂಸ್ಕೃತಿ’ ವಿಷಯ ಕುರಿತು ಉಪನ್ಯಾಸ ನೀಡಿ, ‘ಭಾರತ ವೈವಿಧ್ಯದಲ್ಲಿ ಏಕತೆ ಕಂಡ ದೇಶ. ಇಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ತಾಯಿ ಸಂಸ್ಕಾರದ ಪ್ರತೀಕ. ತಾಯಿಯ ಸಂಸ್ಕಾರದಿಂದ ಮಕ್ಕಳು ಒಳ್ಳೆಯ ಗುಣ ಕಲಿಯುತ್ತಾರೆ. ವೃದ್ಧಾಶ್ರಮಗಳು ನಶಿಸಿ ಮತ್ತೆ ಮಾತೃದೇವೋಭವ ಎಂಬ ಮಂತ್ರ ಪ್ರತಿ ಮನೆಯಲ್ಲಿ ಮೊಳಗಬೇಕಿರುವುದು ಇಂದಿನ ಜರೂರು’ ಎಂದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ನಡೆಸಿ ಕೊಟ್ಟರು. ಮನೋಜ್ ವೈ. ಸುಳ್ಳದ ಧಾರ್ಮಿಕ ಗ್ರಂಥ ವಾಚಿಸಿದರು. ನಂದೀಶ್ ಬಿ. ಸುಳ್ಳದ ವಚನ ಚಿಂತನ ನಡೆಸಿಕೊಟ್ಟರು.
ಐಟಿಐ ಕಾಲೇಜಿನ ಪ್ರಾಚಾರ್ಯ ಶ್ರೀಧರ ಪಾಟೀಲ ಇದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹ ಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿ ಸಹ ಚೇರ್ಮನ್ ಶಿವಾನಂದ ಹೊಂಬಳ, ಶಿವಾನುಭವ ಸಮಿತಿ ಚೇರ್ಮನ್ ಐ.ಬಿ.ಬೆನಕೊಪ್ಪ, ಸೋಮನಾಥ ಪುರಾಣಿಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.