ಲಕ್ಷ್ಮೇಶ್ವರ: ‘ಉಗ್ರರನ್ನು ಸದೆಬಡಿಯಲು ಸನ್ನದ್ಧರಾಗಿರುವ ಭಾರತದ ಯೋಧರಿಗೆ ಜಯ ಸಿಗಲಿ. ಉಗ್ರವಾದ ಸರ್ವನಾಶವಾಗಲಿ, ಉಗ್ರವಾದಿಗಳಿಗೆ ಯೋಧರು ತಕ್ಕ ಪಾಠ ಕಲಿಸಲು ಎಂದು ಪ್ರಾರ್ಥಿಸಿ ಪಟ್ಟಣದ ವಿವಿಧ ಮಸೀದಿಗಳಲ್ಲಿ ಶುಕ್ರವಾರ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ನಂತರ ಪಟ್ಟಣದ ಪೀರಂಕಳ್ಳಿ ಮಸೀದಿಯಿಂದ ವೀರ ಕನ್ನಡಿಗ ಟಿಪ್ಪು ಸೇನೆಯ ಸದಸ್ಯರು ಮೆರವಣಿಗೆ ಸಂಘಟಿಸಿದ್ದರು. ಹತ್ತಾರು ಮುಸ್ಲಿಂ ಸಹೋದರರು ಕೈಯಲ್ಲಿ ತಿರಂಗ ಧ್ವಜ ಹಿಡಿದುಕೊಂಡು ಜೈ ಭಾರತ ಮಾತಾಕೀ ಜೈ, ವಂದೇ ಮಾತರಂ ಎಂಬ ಘೋಷಣೆ ಕೂಗುತ್ತ ದೂದಪೀರಾಂ ದರ್ಗಾಕ್ಕೆ ಆಗಮಿಸಿದರು. ಅಲ್ಲಿ ದೂದಪೀರಾಂ ಅವರ ಗದ್ದುಗೆಗೆ ಚಾದರ ಹೊಚ್ಚಿ ಮತ್ತೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೌಲಾನಾ ಉಸ್ಮಾನ್ ಹಸ್ರಪಿ, ಹಾಫೀಜ್ ಸಾದಿಕ್, ಮೌಲ್ವಾನ ಖಯೂಮ್, ಮೌಲಾನಾ ಪಾರೂಕ್, ಮುನ್ನಾ ಹಜರತ, ಜಾಕೀರ್ಹುಸೇನ್ ಹವಾಲ್ದಾರ, ಹಜರತ್ ಪಟೇಲ್ ಕನಕವಾಡ, ಮಹಮ್ಮದಲೀ ಕಾರಡಗಿ, ಖ್ವಾಜಾಪೀರ್ ಜಮಖಂಡಿ, ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಎಂ.ಎಂ. ಗದಗ, ಶಪೀಕ್ ಸಿದ್ದಾಪುರ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.