ಮುಂಡರಗಿ: ಮಲೆನಾಡು ಹಾಗೂ ತುಂಗಭದ್ರಾ ಅಚ್ಚಕಟ್ಟು ಪ್ರದೇಶದಲ್ಲಿ ಹಲವು ದಿನಗಳು ಸುರಿದ ಭಾರಿ ಮಳೆಯ ಕಾರಣದಿಂದ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ನಿರ್ಮಿಸಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜು ಭರ್ತಿಯಾಗಿದ್ದು, ಹಲವು ದಿನಗಳಿಂದ ಹೆಚ್ಚುವರಿ ನೀರನ್ನು ನದಿಪಾತ್ರಕ್ಕೆ ಹರಿಸಲಾಗುತ್ತಿದೆ.
ಜೂನ್ 25ರಂದು 27,227 ಕ್ಯುಸೆಕ್, ಜೂನ್ 26ರಂದು 42,448, ಜೂನ್ 27ರಂದು 55,267, ಜೂನ್ 28ರಂದು 63,954, ಜೂನ್ 29ರಂದು 53,007, ಜೂನ್ 30ರಂದು 32,983 ಹಾಗೂ ಜುಲೈ 1ರಂದು 34,149 ಕ್ಯುಸೆಕ್ ಹೊಸನೀರು ಬ್ಯಾರೇಜಿಗೆ ಹರಿದು ಬಂದಿದೆ. ಬ್ಯಾರೇಜಿನ ಐದು ಗೇಟ್‌ಗಳ ಮೂಲಕ ಅಷ್ಟೇ ಪ್ರಮಾಣದ ನೀರನ್ನು ನಿತ್ಯ ನದಿಗೆ ಹರಿಸಲಾಗುತ್ತಿದೆ.
ಸಾಮಾನ್ಯವಾಗಿ ಜುಲೈ ಹಾಗೂ ಆಗಸ್ಟ್‌ನಲ್ಲಿ ಶಿಂಗಟಾಲೂರ ಏತ ನೀರಾವರಿ ಬ್ಯಾರೇಜ್ ಹಾಗೂ ತುಂಗಭದ್ರಾ ನದಿಗೆ ಸಾಕಷ್ಟು ಪ್ರಮಾಣದ ನೀರು ಹರಿದು ಬರುತ್ತದೆ. ಆದರೆ ಪ್ರಸ್ತುತ ವರ್ಷ ಮೇ ತಿಂಗಳಿನಲ್ಲಿ ರಾಜ್ಯದಾದ್ಯಂತ ಉತ್ತಮವಾಗಿ ಮಳೆ ಸುರಿಯಿತು. ಜೊತೆಗೆ ಮುಂಗಾರು ಮಳೆಯು ಈ ವರ್ಷ ಅವಧಿಗೂ ಪೂರ್ವದಲ್ಲಿಯೇ ರಾಜ್ಯವನ್ನು ಪ್ರವೇಶಿಸಿತು. ಈ ಕಾರಣದಿಂದ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆ ಸುರಿದು ತುಂಗಭದ್ರಾ ನದಿಗೆ ಅವಧಿಗೂ ಪೂರ್ವದಲ್ಲಿಯೇ ಸಾಕಷ್ಟು ನೀರು ಹರಿದು ಬಂದಿತು.
ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಡಿಯಲ್ಲಿ ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ಹಲವಾರು ಪಟ್ಟಣ ಹಾಗೂ ಗ್ರಾಮಗಳಿಗೆ ಹಮ್ಮಿಗಿ ಗ್ರಾಮದ ಬಳಿಯ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಿಂದ ನಿತ್ಯ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸದ್ಯ ಮುಂಗಾರು ಹಂಗಾಮಿನ ಆರಂಭದಲ್ಲಿಯೇ ಬ್ಯಾರೇಜ್‌ನಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದ್ದು, ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜು ಗರಿಷ್ಠ 3 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಯೋಜನೆಯ ಹಿನ್ನೀರಿನಲ್ಲಿ ತಾಲ್ಲೂಕಿನ ಗುಮ್ಮಗೋಳ ಬಿದರಳ್ಳಿ ಹಾಗೂ ವಿಠಲಾಪುರ ಗ್ರಾಮಗಳು ಮುಳುಗಡೆಯಾಗಲಿವೆ. ಮುಳುಗಡೆ ಗ್ರಾಮಗಳನ್ನು ಸಮರ್ಪಕವಾಗಿ ಸ್ಥಳಾಂತರಿಸದೇ ಇರುವುದರಿಂದ ಬ್ಯಾರೇಜಿನಲ್ಲಿ ಗರಿಷ್ಠ ಪ್ರಮಾಣದ ನೀರನ್ನು ಸಂಗ್ರಹಿಸುವುದು ಸಾಧ್ಯವಾಗುತ್ತಿಲ್ಲ. ಮೂರು ಗ್ರಾಮಗಳನ್ನು ಸಮರ್ಪಕವಾಗಿ ಸ್ಥಳಾಂತರಗೊಳಿಸದೇ ಇರುವುದರಿಂದ ಬ್ಯಾರೇಜ್‌ನಲ್ಲಿ ಮೂರು ಟಿಎಂಸಿ ಬದಲಾಗಿ ಈಗ ಕೇವಲ 1.9 ಟಿಎಂಸಿ ಅಡಿ ನೀರನ್ನು ಮಾತ್ರ ಸಂಗ್ರಹಿಸಬೇಕಾಗಿದೆ. ನಮ್ಮ ಪಾಲಿನ 3 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಿಕೊಂಡರೆ ಜಿಲ್ಲೆಯ ಜನತೆಗೆ ವರ್ಷದುದ್ದಕ್ಕೂ ನಿರಾಯಾಸವಾಗಿ ಕುಡಿಯುವ ನೀರು ಪೂರೈಸಬಹುದಾಗಿದೆ. ಜೊತೆಗೆ ಗದಗ ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಯ ರೈತರ ಜಮೀನಿಗೆ ಮಳೆಗಾಲದಲ್ಲಿ ನೀರು ಒದಗಿಸಬಹುದಾಗಿದೆ ಎಂದು ರೈತರು ಹೇಳುತ್ತಾರೆ.
ಮೂರು ಗ್ರಾಮಗಳು ಸ್ಥಳಾಂತರಗೊಂಡರೆ ನಮ್ಮ ರೈತರ ಜಮೀನುಗಳಿಗೆ ವರ್ಷದುದ್ದಕ್ಕೂ ನೀರು ಹಾಯಲಿದೆ. ಈ ಕುರಿತು ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಬೇಕು ಸಂಘದ ಕಾರ್ಯದರ್ಶಿ-ಶಿವಾನಂದ ಇಟಗಿ, ರಾಜ್ಯ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.