
ಗದಗ: ‘ಉದ್ಯೋಗಾವಕಾಶಗಳು ಕೇವಲ ನಿರೀಕ್ಷೆಯಿಂದ ಬರುವುದಿಲ್ಲ; ಬದಲಾಗಿ ಕೌಶಲ, ಆತ್ಮವಿಶ್ವಾಸ ಮತ್ತು ನಿರಂತರ ಕಲಿಕೆಯ ಮೂಲಕ ವಿದ್ಯಾರ್ಥಿಗಳು ಅವಕಾಶಗಳನ್ನು ತಾವೇ ನಿರ್ಮಿಸಿಕೊಳ್ಳಬೇಕು’ ಎಂದು ಪ್ರಭಾರ ಕುಲಪತಿ ಪ್ರೊ.ಸುರೇಶ ವಿ.ನಾಡಗೌಡರ ಹೇಳಿದರು.
ನಗರದ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ನೈಪುಣ್ಯ ಕೇಂದ್ರದಿಂದ ನಡೆದ ಉನ್ನತಿ–2025 ಕ್ಯಾಂಪಸ್ ಪ್ಲೇಸ್‌ಮೆಂಟ್ ಡ್ರೈವ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಷ್ಟ್ರದ ಅಭಿವೃದ್ಧಿ ಯುವಕರ ಕೈಯಲ್ಲಿದೆ. ಲಭಿಸಿದ ಪ್ರತಿಯೊಂದು ಅವಕಾಶವನ್ನೂ ಧೈರ್ಯದಿಂದ ಸದುಪಯೋಗಪಡಿಸಿಕೊಳ್ಳಬೇಕು. ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಉದ್ಯೋಗ, ಉದ್ಯಮಶೀಲತೆ ಮತ್ತು ಗ್ರಾಮಾಭಿವೃದ್ಧಿ ಕ್ಷೇತ್ರಗಳಲ್ಲಿ ಸಶಕ್ತಗೊಳಿಸಲು ಬದ್ಧವಾಗಿದೆ’ ಎಂದರು.
ಆಡಳಿತಾಧಿಕಾರಿ ಶಶಿಭೂಷಣ್ ದೇವೂರ ಪ್ರಾಸ್ತಾವಿಕವಾಗಿ ಮಾತನಾಡಿ, ‘ವಿಶ್ವವಿದ್ಯಾಲಯದ ನೈಪುಣ್ಯಾಭಿವೃದ್ಧಿ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ’ ಎಂದರು.
ವಿಶ್ವವಿದ್ಯಾಲಯದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಟೆಕ್ ಮಹೀಂದ್ರಾ, ಟಾಟಾ ಕ್ಯಾಪಿಟಲ್, ಅಮ್ವೇ ಗ್ಲೋಬಲ್ ಸರ್ವಿಸಸ್, ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್, ಸ್ಮೂರ್ ಚಾಕೊಲೆಟ್, ಅಜೀಂ ಪ್ರೇಮ್‌ಜೀ ಫೌಂಡೇಷನ್, ಸಿಂಗ್ನಾಂಟಾ ಫೌಂಡೇಷನ್ ಇಂಡಿಯಾ, ಇಂಡಿಯಾ ಲಿಟರಸಿ ಪ್ರಾಜೆಕ್ಟ್, ಪ್ಲಾನೆಟ್ ಪಿಸಿಐ ಇನ್ಫೋಟೆಕ್, ವಿಜಿ ಇಲ್ಯೂಮಿನೇಟ್ ಸೊಲ್ಯೂಷನ್ಸ್, ಟೀಂಲೀಸ್ ಸರ್ವಿಸಸ್, ಧರತಿ ಜಿಯೋ ಇನ್ಸೈಟ್ ಪ್ರೈ. ಲಿ., ಕರಿಬಸವೇಶ್ವರ ಅಗ್ರಿ ಇಂಡಿಯಾ ಪ್ರೈ. ಲಿ., ಗ್ರಾಸ್‌ರೂಟ್ಸ್ ರಿಸರ್ಚ್ ಅಂಡ್ ಅಡ್ವಕಸಿ ಮೂವ್‌ಮೆಂಟ್, ಕ್ರೆಡಿಟ್ ಬೆಸ್ಟ್ ಫೈನಾನ್ಷಿಯಲ್ ಸೊಲ್ಯೂಷನ್ಸ್ ಸೇರಿದಂತೆ 25ಕ್ಕೂ ಹೆಚ್ಚು ರಾಷ್ಟ್ರ ಮತ್ತು ರಾಜ್ಯಮಟ್ಟದ ಸಂಸ್ಥೆಗಳು ಭಾಗವಹಿಸಿದ್ದವು.
ಈ ಪ್ಲೇಸ್‌ಮೆಂಟ್ ಮೇಳದ ಮೂಲಕ ವಿದ್ಯಾರ್ಥಿಗಳಿಗೆ ಕಾರ್ಪೊರೇಟ್, ಫೈನಾನ್ಸ್, ಎನ್‌ಜಿಒ, ತಂತ್ರಜ್ಞಾನ, ಕೃಷಿ ಮತ್ತು ಸೇವಾ ಕ್ಷೇತ್ರಗಳಲ್ಲಿ ವಿವಿಧ ಉದ್ಯೋಗಾವಕಾಶಗಳು ಲಭ್ಯವಾದವು.
ವಿಶೇಷಾಧಿಕಾರಿ (ಶೈಕ್ಷಣಿಕ) ಎಂ.ಬಿ. ಚನ್ನಪ್ಪಗೌಡರ, ಪ್ಲೇಸ್‌ಮೆಂಟ್ ಅಧಿಕಾರಿ ಸಿತಾರಾ ಎಂ. ರಾಯಭಾಗಿ ಹಾಗೂ ತಂಡದ ಸದಸ್ಯರಾದ ಅಭಿಷೇಕ್ ಎಚ್.ಇ., ಮೊಹಮ್ಮದ್ ಅಝರುದ್ದೀನ್ ಬಿ.ಆರ್., ಮೋಹನ್ ಕೆ.ಆರ್., ನಿವೇದಿತಾ, ದೇವರಾಜ್ ಡಿ. ಹಾಗೂ ಒಜಸ್ವಿ ಇದ್ದರು.
ಉದ್ಯೋಗ ಮೇಳದಲ್ಲಿ 180 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು ಅವರಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸಂಸ್ಥೆಗಳಿಗೆ ಆಯ್ಕೆಯಾಗಿದ್ದಾರೆ–ಪ್ರೊ.ಸುರೇಶ ವಿ.ನಾಡಗೌಡರ, ಪ್ರಭಾರ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.