ಲಕ್ಷ್ಮೇಶ್ವರ: ತಾಲ್ಲೂಕಿನ ಶೆಟ್ಟಿಕೇರಿ ಹಾಗೂ ಅಕ್ಕಿಗುಂದ ನಡುವಿರುವ ಮಾಲ್ಕಿ ಜಮೀನಿನಲ್ಲಿ ಹಗಲು ರಾತ್ರಿ ಎನ್ನದೇ ಗುತ್ತಿಗೆದಾರರು ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದು ಅಧಿಕ ಭಾರಕ್ಕೆ ರಸ್ತೆಗಳು ಹಾಳಾಗುತ್ತಿವೆ ಎಂದು ಆರೋಪಿಸಿ ಬುಧವಾರ ಅಕ್ಕಿಗುಂದ ಗ್ರಾಮಸ್ಥರು ಟಿಪ್ಪರ್ ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶೆಟ್ಟಿಕೇರಿ-ಅಕ್ಕಿಗುಂದ ಮಧ್ಯ ಅಕ್ಕಿಗುಂದ ಗುಡ್ಡದ ಹತ್ತಿರ ಮಾಲ್ಕಿ ಜಮೀನಿನಲ್ಲಿ ಯಾವುದೇ ಭಯ ಇಲ್ಲದೆ ಮಣ್ಣುಗಳ್ಳರು ಹಿಟಾಚಿಗಳ ಮೂಲಕ ನಿರಂತರವಾಗಿ ಮಣ್ಣನ್ನು ಲೂಟಿ ಮಾಡಲಾಗುತ್ತಿದ್ದಾರೆ. ಪ್ರತಿದಿನ ನೂರಾರು ಲೋಡ್ ಮಣ್ಣು ಇಲ್ಲಿಂದ ಸಾಗಾಟ ನಡೆಯುತ್ತಿದ್ದು ಇದನ್ನು ಗುತ್ತಿಗೆದಾರರು ಟಿಪ್ಪರ್ ಮೂಲಕ ಶೆಟ್ಟಿಕೇರಿ-ಅಕ್ಕಿಗುಂದ ಮಾರ್ಗವಾಗಿ ಗದುಗಿನ ರಸ್ತೆಗೆ ಸಾಗಿಸುತ್ತಿದ್ದಾರೆ.
ಟಿಪ್ಪರ್‌ಗಳ ಅಧಿಕ ಭಾರಕ್ಕೆ ತಾಲ್ಲೂಕಿನ ರಸ್ತೆಗಳು ಹಾಳಾಗಿದ್ದು ಅನೇಕ ಕಡೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು.
’ನಮ್ಮ ಊರಿನ ರಸ್ತೆಯ ಮೇಲೆ ನಮಗೆ ಓಡಾಡಲು ಆಗುತ್ತಿಲ್ಲ. ಅಷ್ಟೊಂದು ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.