ADVERTISEMENT

ಪೊಕ್ಸೊ ಆರೋಪಿಗೆ ಮೂರು ವರ್ಷ ಕಠಿಣ ಶಿಕ್ಷೆ

ನಕಲಿ ಗೊಬ್ಬರದ ಬಗ್ಗೆ ಎಚ್ಚರ ವಹಿಸಿ– ಎಸ್‌ಪಿ ಶಿವಪ್ರಕಾಶ್‌ ದೇವರಾಜು ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 2:11 IST
Last Updated 2 ಆಗಸ್ಟ್ 2022, 2:11 IST
ಶಿವಪ್ರಕಾಶ್ ದೇವರಾಜು
ಶಿವಪ್ರಕಾಶ್ ದೇವರಾಜು   

ಗದಗ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಕಾರ್ತಿಕ ಹಿರೇಮಠಗೆ (24) ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 3 ವರ್ಷ ಕಠಿಣ ಶಿಕ್ಷೆ ಹಾಗೂ ₹35 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು ತಿಳಿಸಿದರು.

ಸೋಮವಾರ ಎಸ್‌ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನರಗುಂದ ಪೊಲೀಸ್‌ ಠಾಣೆಯಲ್ಲಿ 2017ರಲ್ಲಿ ಪೊಕ್ಸೊ (ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು’ ಎಂದು ಅವರು ತಿಳಿಸಿದರು.

‘ಪ್ರಕರಣದ ತನಿಖೆ ನಡೆಸಿದ್ದ ಸಿಪಿಐ ಗಿರೀಶ್‌ ಪಿ.ರೋಡಕರ್‌ ಅವರು 2018ರ ಮಾರ್ಚ್‌ 30ರಂದು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ವಿಚಾರಣೆ ನಡೆಸಿ, ಆರೋಪ ಸಾಬೀತಾಗಿದ್ದರಿಂದ ಕಾರ್ತಿಕ್‌ಗೆ ಶಿಕ್ಷೆ ಮತ್ತು ದಂಡ ವಿಧಿಸಿ ಜುಲೈ 30ರಂದು ತೀರ್ಪು ಪ್ರಕಟಿಸಿದೆ’ ಎಂದು ಅವರು ತಿಳಿಸಿದರು.

ADVERTISEMENT

ಸಂತ್ರಸ್ತೆ ಪರ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ (ಪೊಕ್ಸೊ) ಅಮರೇಶ ಹಿರೇಮಠ ಮಾತನಾಡಿ, ‘18 ವರ್ಷದೊಳಗಿನ ಬಾಲಕಿಯರ ಜತೆಗೆ ಅಸಭ್ಯವಾಗಿ ವರ್ತಿಸುವವರಿಗೆ ಈ ಪ್ರಕರಣದ ತೀರ್ಪು ಎಚ್ಚರಿಕೆ ಗಂಟೆಯಂತಿದೆ. ಬಾಲಕಿಯರ ಜತೆಗೆ ಪ್ರೀತಿ, ಪ್ರೇಮ ಅಂತ ಅಡ್ಡಾಡುವುದು ತಪ್ಪು. ಒಂದು ವೇಳೆ ಇಲ್ಲಿ ಬಾಲಕಿಯ ಒಪ್ಪಿಗೆಯಿದ್ದರೂ ಕಾನೂನು ಅದನ್ನು ಸಮ್ಮತಿಸುವುದಿಲ್ಲ. ಬಾಲಕಿಯರ ಜತೆಗೆ ಅಡ್ಡಾಡುವುದನ್ನು ನೋಡಿ, ಅವರ ತಂದೆ ತಾಯಿಗಳು ದೂರು ದಾಖಲಿಸಿದರೂ ಕೂಡ ಪೊಕ್ಸೊ ಪ್ರಕರಣ ದಾಖಲಾಗುತ್ತದೆ’ ಎಂದು ಹೇಳಿದರು.

‘ಈ ಪ್ರಕರಣದಲ್ಲಿ ಸಾಕ್ಷಿದಾರರು ಸಂತ್ರಸ್ತೆ ಪರವಾಗಿ ಸಾಕ್ಷ್ಯ ನುಡಿದಿದ್ದರಿಂದ ಆರೋಪಿಗೆ ಶಿಕ್ಷೆ ಆಗಿದೆ. ಸರ್ಕಾರ ಸಂತ್ರಸ್ತೆಗೆ ₹1 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ’ ಎಂದು ಹೇಳಿದರು.

ನಕಲಿ ಗೊಬ್ಬರ ಮಾರಾಟ: ಮೂವರ ಬಂಧನ

ನಕಲಿ ಡಿಎಪಿ ಗೊಬ್ಬರ ಮಾರಾಟಕ್ಕೆ ಸಂಬಂಧಿಸಿದಂತೆ ರೋಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಮೂರು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು ತಿಳಿಸಿದರು.

ಪ್ರಕರಣದ ಪ್ರಮುಖ ಆರೋಪಿಗಳಾದ ಬಾಲಮುರುಗನ್‌, ಮಂಜುನಾಥ್‌, ತಿಪ್ಪೆಸ್ವಾಮಿ ಬಂಧಿತರು ಎಂದು ಅವರು ತಿಳಿಸಿದರು.

‘ಇದೇ ಮಾದರಿಯಲ್ಲಿ ನಕಲಿ ಡಿಎಪಿ ಗೊಬ್ಬರ ಮಾರಾಟ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಚಿತ್ರದುರ್ಗ ಪೊಲೀಸರು ಕೂಡ ಪ್ರಕರಣ ದಾಖಲಿಸಿದ್ದಾರೆ. ಅಲ್ಲಿನ ಪೊಲೀಸರು 10 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ಮಾಡಿದಾಗ ನಕಲಿ ಗೊಬ್ಬರ ತಮಿಳುನಾಡಿನ ಸೇಲಂನಿಂದ ಕರ್ನಾಟಕ್ಕೆ ಸರಬರಾಜು ಆಗುತ್ತಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ’ ಎಂದು ಹೇಳಿದರು.

‘ನಕಲಿ ಗೊಬ್ಬರದ ಪ್ರಮುಖ ಪೂರೈಕೆದಾರ ಯಾರು? ಎಲ್ಲಿ ತಯಾರಾಗಿ ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದರು.

‘ನಕಲಿ ರಾಸಾಯನಿಕ ಗೊಬ್ಬರ ಮಾರಾಟ ಹೆಚ್ಚುತ್ತಿದ್ದು, ರೈತರು ಈ ಬಗ್ಗೆ ಜಾಗೃತರಾಗಬೇಕು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ತಿಳಿಸಬೇಕು’ ಎಂದು ಮನವಿ ಮಾಡಿದರು.

50 ಕೆ.ಜಿ. ತೂಕದ ಜೈಕಿಸಾನ್‌ ಮಂಗಳ ಡಿಎಪಿ ನಕಲಿ ಗೊಬ್ಬರದ 475 ಚೀಲಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಒಟ್ಟು ಮೌಲ್ಯ ₹6.41 ಲಕ್ಷ ಎಂದು ಅಂದಾಜಿಸಲಾಗಿದೆ
ಶಿವಪ್ರಕಾಶ್‌ ದೇವರಾಜು, ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.