ರೋಣ: ತಾಲ್ಲೂಕಿನಾದ್ಯಂತ ಮುಂಗಾರು ಮಳೆ ಕೈಕೊಟ್ಟಿದ್ದು, ಇದರಿಂದ ಕಂಗಾಲಾದ ರೈತರು ದೇವರ ಮೊರೆ ಹೋಗುತ್ತಿದ್ದಾರೆ. ತಾಲ್ಲೂಕಿನ ಬಾಚಲಾಪುರ ಗ್ರಾಮದಲ್ಲಿ ಮಹಿಳೆಯರು ಮಳೆಗಾಗಿ ಕೆರೆಯಲ್ಲಿ ಗಂಗಾಪೂಜೆ ಕೈಗೊಂಡಿದ್ದು ಅದರ ಭಾಗವಾಗಿ ಗುರ್ಜಿ ಆಡಿ ದವಸಧಾನ್ಯ ಸಂಗ್ರಹ ಮಾಡಿ ಪ್ರಸಾದ ವಿತರಣೆ ಮಾಡಿದರು.
ಉತ್ತರ ಕರ್ನಾಟಕದ ಮಳೆ ತರುವ ಸಾಂಪ್ರದಾಯಿಕ ದೇವರು ಎಂಬ ನಂಬಿಕೆ ಗುರ್ಜಿಗೆ ಇದ್ದು ಪ್ರತಿವರ್ಷ ಭಾದ್ರಪದ ಆಶ್ವೇಜ ಮಾಸಗಳಲ್ಲಿ ಹಳ್ಳಿಗಳಲ್ಲಿ ಮಳೆಯಾಗದೇ ಇದ್ದಾಗ ಗುರ್ಜಿ ಆಡುವುದು ಸಾಮಾನ್ಯ. ಗುರ್ಜಿ ಆಡಿ ಹೋದ ಏಳೆಂಟು ದಿನಗಳಲ್ಲಿ ಮಳೆ ಬರುತ್ತದೆ ಎಂಬ ಬಲವಾದ ನಂಬಿಕೆ ಇಲ್ಲಿನ ಜನರಲ್ಲಿದೆ.
ರೊಟ್ಟಿ ಬೇಯಿಸುವ ಹೆಂಚಿನ ಮೇಲೆ ಸಗಣಿಯಿಂದ ಗುರ್ಜಿ ತಯಾರಿಸಿ (ಮೂರ್ತಿ ತರಹ) ಗರಿಕೆಯಿಂದ ಶೃಂಗರಿಸುತ್ತಾರೆ. ಅದನ್ನು ಹೆಂಚಿನ ಮೇಲಿಟ್ಟುಕೊಂಡು, ತಲೆಯ ಮೇಲೆ ಹೊತ್ತುಕೊಂಡು ಗ್ರಾಮದ ಓಣಿಗಳಲ್ಲಿ ತಿರುಗುತ್ತಾರೆ. ಆಗ ಮನೆಯವರು ತಂಬಿಗೆಯಲ್ಲಿ ನೀರು ತಂದು ಗುರ್ಜಿಯ ಮೇಲೆ ಸುರಿಯುತ್ತಾರೆ.
ನೀರು ಹಾಕುವಾಗ ಗುರ್ಜಿ ಹೊತ್ತುಕೊಂಡ ಮಕ್ಕಳು ಗರಗರನೇ ತಿರುಗುತ್ತಾರೆ. ಆಗ ಪಕ್ಕದಲ್ಲಿನ ಯುವಕರು, ಮಕ್ಕಳು, ಮಹಿಳೆಯರು ಸೇರಿ ಗುರ್ಜಿಯ ಜಾನಪದ ಹಾಡು ಹಾಡುತ್ತಾರೆ. ನಂತರ ಗುರ್ಜಿಯಿಂದ ಸಂಗ್ರಹಿಸಿದ ಜೋಳವನ್ನು ಗಿರಣಿಯಲ್ಲಿ ಒಡೆಸಿ ಊರ ದೇಗುಲದ ಆವರಣದಲ್ಲಿಯೇ ನುಚ್ಚು, ಸಾರು ತಯಾರಿಸಿ ಮೇಘರಾಜನಿಗೆ ನೈವೇದ್ಯ ಮಾಡಿ ಪೂಜೆ ಮಾಡುತ್ತಾರೆ.
ಪ್ರಸಕ್ತ ಸಾಲಿನಲ್ಲಿ ರೋಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮುಂಗಾರು ಮಳೆ ಕೊರತೆಯಾಗಿದ್ದು, ಈಗಾಗಲೇ ಹೆಸರು, ಮೆಕ್ಕೆಜೋಳ, ಈರುಳ್ಳಿ, ಶೇಂಗಾ ಬೆಳೆದಿರುವ ರೈತರಲ್ಲಿ ಬರ ಆವರಿಸುವ ಭೀತಿ ಉಂಟಾಗಿದೆ. ಅನಿವಾರ್ಯವಾಗಿ ಬಾಸಲಾಪುರ ಗ್ರಾಮದ ರೈತರು ದೇವರ ಮೊರೆ ಹೋಗುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.