
ಗದಗ: ‘ಕರ್ತವ್ಯವನ್ನು ಒತ್ತಡರಹಿತವಾಗಿ ನಿರ್ವಹಿಸಲು ಕ್ರೀಡಾಕೂಟಗಳು ಅತ್ಯವಶ್ಯಕ’ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗದಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
‘ಕ್ರೀಡಾಕೂಟಗಳಿಂದ ಗೆಲ್ಲುವ ಹಠ, ಛಲ, ತಂಡ ಸ್ಫೂರ್ತಿ ಸಿಗುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸುಸಂದರ್ಭ ಲಭ್ಯವಾಗುತ್ತದೆ. ದಿನನಿತ್ಯದ ಕೆಲಸದ ನಡುವೆ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಹೊಸ ಚೈತನ್ಯ ಬರುತ್ತದೆ’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ‘ಪೊಲೀಸ್ ಸಿಬ್ಬಂದಿಯ ಒತ್ತಡದ ಕೆಲಸದ ನಡುವೆ ಉತ್ತಮ ಆರೋಗ್ಯಕ್ಕಾಗಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ’ ಎಂದರು.
‘ನಮ್ಮ ತಂಡ ಗೆಲ್ಲಿಸುವ ಮೂಲಕ ನಮ್ಮ ಜಿಲ್ಲೆಯನ್ನು ಗೆಲ್ಲಿಸುವ ಉದ್ದೇಶ ಹೊಂದಲಾಗಿದ್ದು, ಎಲ್ಲ ಸಿಬ್ಬಂದಿ ಕ್ರೀಡಾಸ್ಫೂರ್ತಿಯಿಂದ ಆಟ ಆಡಬೇಕು’ ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಡಿಎಆರ್, ಗದಗ ಶಹರ, ಬೆಟಗೇರಿ ವೃತ್ತ, ಗದಗ ಗ್ರಾಮೀಣ, ಮುಳಗುಂದ, ರೋಣ, ನರಗುಂದ, ಮುಂಡರಗಿ, ಶಿರಹಟ್ಟಿ ತಂಡಗಳನ್ನು ಎಸ್‌ಪಿ ರೋಹನ್ ಜಗದೀಶ್ ಅವರು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಪರಿಚಯಿಸಿದರು.
2024ರ ಪೊಲೀಸ್ ಕ್ರೀಡಾಕೂಟದ ವೈಯಕ್ತಿಕ ಚಾಂಪಿಯನ್ ಅನಿಲ ಬನ್ನಿಕೊಪ್ಪ ಅವರು ಕ್ರೀಡಾಜ್ಯೋತಿ ಬೆಳಗಿಸಿದರು.
ಡಿವೈಎಸ್‌ಪಿಗಳಾದ ಪ್ರಭುಗೌಡ, ಮುರ್ತುಜಾ ಖಾದ್ರಿ, ಮಹಾಂತೇಶ ಸಜ್ಜನರ, ವಿದ್ಯಾನಂದ ನಾಯಕ್ ಸೇರಿದಂತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕ್ರೀಡೆಯಲ್ಲಿ ಗೆಲುವು-ಸೋಲು ಇದ್ದೇ ಇರುತ್ತದೆ. ಇದರ ಹೊರತಾಗಿ ಕ್ರೀಡೆಗಳಲ್ಲಿ ಖುಷಿಯಿಂದ ಭಾಗವಹಿಸಬೇಕು. ಪ್ರತಿಜ್ಞಾವಿಧಿ ಸ್ವೀಕರಿಸಿದಂತೆ ಎಲ್ಲರೂ ಮುಕ್ತ ಮನಸ್ಸಿನಿಂದ ಆಟದಲ್ಲಿ ಭಾಗವಹಿಸಬೇಕುಸಿ.ಎನ್. ಶ್ರೀಧರ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.