ಗದಗ: ‘ಶ್ರೀರಾಮಸೇನೆ ಕಾರ್ಯಕರ್ತರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ’ ಎಂದು ದಲಿತ ಸಂಘಟನೆಗಳ ಒಕ್ಕೂಟ ಮುಖಂಡ ಮುತ್ತು ಬಿಳೆಯಲಿ ಆರೋಪ ಮಾಡಿದ್ದಾರೆ.
‘ರಾಷ್ಟ್ರಧ್ವಜಕ್ಕೆ ಸಮಾನಾಂತರವಾಗಿ ಯಾವುದೇ ಧ್ವಜ ಹಾರಿಸಬಾರದು ಎಂಬ ನಿಯಮ ಇದೆ. ಆದರೆ, ಗದಗ ನಗರದಲ್ಲಿ ಶ್ರೀರಾಮ ಸೇನೆ ಸಂಘಟನೆಯವರು ರಾಷ್ಟ್ರಧ್ವಜಕ್ಕೆ ಸಮಾನಾಂತರವಾಗಿ ಭಗವಾಧ್ವಜ ಹಾರಿಸಿದ್ದಾರೆ. ದಲಿತ ಮುಖಂಡ ಮುತ್ತಣ್ಣ ಚವಡಣ್ಣವರ ಇದನ್ನು ಪ್ರತ್ಯಕ್ಷವಾಗಿ ನೋಡಿ ಒಕ್ಕೂಟಕ್ಕೆ ತಿಳಿಸಿದ್ದಾರೆ. ಶ್ರೀರಾಮ ಸೇನೆಯವರು ದೇಶದ ಸಂವಿಧಾನ ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.
‘ಜ.26 ಹಾಗೂ ಆ.15 ರಂದು ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಚಿತ್ರದ ಜತೆಗೆ ಬಿ.ಅರ್.ಅಂಬೇಡ್ಕರ್ ಚಿತ್ರ ಇಡಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದರೂ ಶ್ರೀರಾಮ ಸೇನೆ ಸರ್ಕಾರದ ಆದೇಶಕ್ಕೆ ಬೆಲೆ ಕೊಡದೆ, ಸ್ವಾತಂತ್ರ್ಯ ಚಳವಳಿಯಲ್ಲಿ ಏನು ಕೊಡುಗೆ ಸಲ್ಲಿಸದ ಹಾಗೂ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟ ಸಾವರ್ಕರ್ ಅವರ ಚಿತ್ರವನ್ನು ಇಟ್ಟು ಸಂಗೊಳ್ಳಿ ರಾಯಣ್ಣನವರಿಗೂ ಅವಮಾನ ಮಾಡಿದ್ದಾರೆ’ ಎಂದು ದೂರಿದ್ದಾರೆ.
‘ಶ್ರೀರಾಮ ಸೇನೆಯು ಭಾರತದ ಸಂವಿಧಾನ ಹಾಗೂ ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡುವುದು ಹೊಸತೇನಲ್ಲ. ಇವರು ಮಾಡುವ ಪ್ರತಿಯೊಂದು ಹೋರಾಟ ಹಾಗೂ ಚಟುವಟಿಕೆಗಳು ಸಂವಿಧಾನಕ್ಕೆ ವಿರುದ್ಧವಾಗಿಯೇ ಇರುತ್ತವೆ. ಶ್ರೀರಾಮ ಸೇನೆಯು ಗದಗದಲ್ಲಿ ದಲಿತ ಮಿತ್ರ ಮೇಳ ಎಂಬ ಸಹಭಾಗಿ ಸಂಘಟನೆಯನ್ನು ಹುಟ್ಟುಹಾಕಿ ದಲಿತ ಯುವಕರನ್ನು ಬಳಸಿಕೊಂಡು ಅವರ ತಲೆಯಲ್ಲಿ ಹುಸಿ ಹಿಂದುತ್ವ ಹಾಗೂ ದೇಶಭಕ್ತಿಯ ಹೆಸರಿನಲ್ಲಿ ಅವರಿಂದ ಸಂವಿಧಾನ ಬಾಹಿರ ಕೆಲಸಗಳನ್ನು ಮಾಡಿಸುತ್ತಾರೆ. ರಾಜ್ಯದ ಅನೇಕ ದಲಿತ ಯುವಕರು ಸಂವಿಧಾನ ಬಾಹಿರ ಕೃತ್ಯಗಳನ್ನು ಮಾಡಿ ಅನೇಕ ಪ್ರಕರಣಗಳಲ್ಲಿ ದಾಖಲಾಗಿದ್ದಾರೆ’ ಎಂದು ದೂರಿದ್ದಾರೆ.
‘ಶ್ರೀರಾಮ ಸೇನೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಕುರಿತು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡಲೇ ಸುಮೊಟೊ ಪ್ರಕರಣ ದಾಖಲಿಸಬೇಕು. ಇಂತಹ ದೇಶ ವಿರೋಧಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ಶ್ರೀರಾಮ ಸೇನೆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು’ ಎಂದು ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.