ADVERTISEMENT

ಗುಣಮಟ್ಟಕ್ಕೆ ಆದ್ಯತೆ ನೀಡಿದ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆ

ನಾಗರಾಜ ಎಸ್‌.ಹಣಗಿ
Published 27 ಜನವರಿ 2024, 4:19 IST
Last Updated 27 ಜನವರಿ 2024, 4:19 IST

ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆಯ ಹೊರನೋಟ

ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆಯ ಹೊರನೋಟ

ಲಕ್ಷ್ಮೇಶ್ವರ: ತಾಲ್ಲೂಕಿನ ಶಿಗ್ಲಿ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಎಸ್.ಎಸ್.ಕೂಡ್ಲಮಠ ಮಾಧ್ಯಮಿಕ ಶಾಲೆ ಗ್ರಾಮೀಣ ಭಾಗದ ಮಕ್ಕಳಿಗೆ 1964ರಿಂದ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂದಿದೆ.

ADVERTISEMENT

ದಿ.ಬಸವಕುಮಾರ ಮುಳಗುಂದ ಮಠ ಹಾಗೂ ಸುರೇಬಾನದ ದಿ.ನೀಲ ಕಂಠ ಗಣಾಚಾರಿಯವರ ಪ್ರೇರಣೆಯಿಂದ ಶಿಗ್ಲಿಯ ಗೆಳೆಯರ ಬಳಗ ಮತ್ತು ಊರು ಹಿರಿಯರ ಬೆಂಬಲದಿಂದ ‘ಗ್ರಾಮ ಭಾರತಿ ಶಿಕ್ಷಣ ಸಮಿತಿ‘ಯು ಅಸ್ತಿತ್ವಕ್ಕೆ ಬಂದು ಎಸ್.ಎಸ್. ಕೂಡ್ಲಮಠ ಮಾಧ್ಯಮಿಕ ಶಾಲೆಯು 1ನೇ ಜೂನ್‌1964ರಲ್ಲಿ, ಅಂದಿನ ಮೈಸೂರು ರಾಜ್ಯದ ವಿಧಾನ ಪರಿಷತ್‌ ಸಭಾಪತಿಯಾಗಿದ್ದ ದಿ.ಜಿ.ವಿ.ಹಳ್ಳಿಕೇರಿಯವರ ಅಧ್ಯಕ್ಷತೆಯಲ್ಲಿ ಅಂದಿನ ಶಿಕ್ಷಣ ಮಂತ್ರಿಯಾಗಿದ್ದ ಎಸ್.ಆರ್.ಕಂಠಿಯವರ ಅಮೃತ ಹಸ್ತದಿಂದ ಉದ್ಘಾಟನೆಯಾಗಿದೆ.

ದಿ.ಮುರಗಯ್ಯ ಕೂಡ್ಲಮಠ ಇವರು ತಮ್ಮ ತಂದೆ ದಿ.ಸಿದ್ದಯ್ಯ ಕೂಡ್ಲಮಠ ಇವರ ಸ್ಮರಣಾರ್ಥ ₹25 ಸಾವಿರ ನಗದು ಹಾಗೂ 6.20 ಎಕರೆ ಭೂಮಿ ದೇಣಿಗೆ ನೀಡಿದ್ದರ ಫಲವಾಗಿ ಶಾಲೆಗೆ ಎಸ್.ಎಸ್. ಕೂಡ್ಲಮಠ ಮಾಧ್ಯಮಿಕ ಶಾಲೆ ಎಂದು ನಾಮಕರಣ ಮಾಡಲಾಯಿತು. ಸಂಸದರು, ಶಾಸಕರು ಮತ್ತು ಅನೇಕ ದಾನಿಗಳ ಮತ್ತು ಹಳೆಯ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸುಂದರ ಭವ್ಯವಾದ ಕಟ್ಟಡ ನಿರ್ಮಾಣಗೊಂಡಿದೆ. ಶಿಕ್ಷಣ ಸಚಿವರಾಗಿದ್ದ ಬಿ.ಎಸ್. ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ ಅಂದಿನ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು 20ನೇ ಆಗಸ್ಟ್‌ 2007ರಂದು ಉದ್ಘಾಟಿಸಿದರು.

ದಿ.ಜಾನಕಿಬಾಯಿ ರಜಪೂತ ಇವರು ಸಂಸ್ಥೆಗೆ ಭೂಮಿ ಹಾಗೂ ಒಂದು ಮನೆಯನ್ನು ದಾನ ಕೊಟ್ಟು ಮಹಿಳಾ ಸಮಾಜಕ್ಕೆ ಆದರ್ಶ ಪ್ರಾಯರಾಗಿದ್ದಾರೆ. ಸಂಸ್ಥೆಯು 1986ರಲ್ಲಿ ಕಾನ್ವೆಂಟ್‌ ಮಾದರಿಯ ಕನ್ನಡ ಮಾಧ್ಯಮಿಕ ಶಾಲೆಯನ್ನು ಆರಂಭಿಸಿತು. 1964ರಲ್ಲಿ 108 ಮಕ್ಕಳಿಂದ ಆರಂಭವಾದ ಸಂಸ್ಥೆಯ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆ ಹಾಗೂ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಕನ್ನಡ ಮತ್ತು ಆಂಗ್ಲ ಶಾಲೆಗಳು ತಲೆ ಎತ್ತಿವೆ. ಸದ್ಯ 968 ಮಕ್ಕಳು ಸಂಸ್ಥೆಯಲ್ಲಿ ವಿದ್ಯೆ ಪಡೆಯುತ್ತಿದ್ದಾರೆ.

ಈ ಶಾಲೆಯಲ್ಲಿ ಶಿಕ್ಷಣ ಪಡೆದವರು ವೈದ್ಯರು, ಎಂಜಿನಿಯರುಗಳು, ಐಎಎಸ್, ಕೆಎಎಸ್, ಐಎಫ್‍ಎಸ್‍ನಂಥ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಕ್ರೀಡೆಯಲ್ಲೂ ಮಕ್ಕಳು ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಶಾಲೆಗೆ ಹೆಸರು ತಂದಿದ್ದಾರೆ. 2022-23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶೇ 88.96, ಇಂಗ್ಲಿಷ್‌ ಮಾದ್ಯಮ ಶಾಲೆಯ ಪ್ರತಿಶತ ಫಲಿತಾಂಶ ಪಡೆದಿವೆ. ಇದಕ್ಕಾಗಿ ಶಾಲಾ ಆಡಳಿತ ಮಂಡಳಿಯು ಶಿಕ್ಷಕರನ್ನು ನಿರಂತರ ಪ್ರೋತ್ಸಾಹಿಸುತ್ತಿದೆ.

ನುರಿತ ಶಿಕ್ಷಕ ವರ್ಗ, ಭವ್ಯ ಕಟ್ಟಡ, ಸುಸಜ್ಜಿತ ಕೊಠಡಿಗಳು, ಉತ್ತಮ ಶೌಚಾಲ ಯಗಳ ವ್ಯವಸ್ಥೆ, ಸುಂದರವಾದ ವಾತಾ ವರಣ ಮಕ್ಕಳಲ್ಲಿ ಕಲಿಕೆಯ ಮಟ್ಟವನ್ನು ಹೆಚ್ಚಿಸುತ್ತಿದ್ದು ಇದರಲ್ಲಿ ಶಿಕ್ಷಕರ ಪರಿಶ್ರಮ ಮರೆಯುವಂತಿಲ್ಲ.

ವಜ್ರಮಹೋತ್ಸವ ಕಾರ್ಯಕ್ರಮ ಇಂದು

ಶಾಲೆಯ ವಜ್ರಮಹೋತ್ಸವ ಇದೇ ಜನವರಿ 27ರಂದು ಜರುಗಲಿದೆ. ಬೆಳಿಗ್ಗೆ 8.30 ಸಂಸ್ಥೆಯ ಅಧ್ಯಕ್ಷ ಎಫ್.ಡಿ. ಹುನಗುಂದ ಧ್ವಜಾರೋಹಣ ನೆರವೇರಿಸುವರು. ಶಾಸಕ ಡಾ.ಚಂದ್ರು ಲಮಾಣಿ ಸಮಾರಂಭ ಉದ್ಘಾಟಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ, ಎಸ್.ಪಿ. ಬಳಿಗಾರ, ಎಚ್.ಎಫ್. ತಳವಾರ, ಎಫ್.ಕೆ. ಕಾಳಪ್ಪನವರ, ಸಿ.ಎಂ. ರಾಗಿ, ಡಿ.ವೈ. ಹುನಗುಂದ ಆಗಮಿಸುವರು. ಎಸ್.ಎಂ. ಮುಳಗುಂದ, ಎನ್.ವೈ. ಹೊಸಮನಿ, ಸದಾಶಿವ ಬಾಳಿಕಾಯಿ ಅವರನ್ನು ಸನ್ಮಾನಿಸಲಾಗುವುದು.

ಸಂಜೆ 5ಕ್ಕೆ ವಾರ್ಷಿಕ ಸ್ನೇಹ ಸಮ್ಮೇಳನ ಆಯೋಜಿಸಲಾಗಿದೆ. ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಎನ್.ಸಿ. ಹುನಗುಂದ ಅಧ್ಯಕ್ಷತೆ ವಹಿಸಿಕೊಳ್ಳುವರು. ಸಾಹಿತಿ ಹಾಗೂ ಶಾಲೆಯ ಹಳೇ ವಿದ್ಯಾರ್ಥಿ ಡಾ.ಶಂಭು ಬಳಿಗಾರ, ಲೋಕಾಯುಕ್ತ ಎಸ್‍ಪಿ ಶಂಕರ ರಾಗಿ, ಉಪ ಅರಣ್ಯಾಧಿಕಾರಿ ಮಂಜುನಾಥ ನಾವಿ ಪಾಲ್ಗೊಳ್ಳುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.