ADVERTISEMENT

ರಾಜ್ಯ ಸರ್ಕಾರ ನಿಷ್ಕ್ರೀಯ: ಸಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 15:16 IST
Last Updated 16 ನವೆಂಬರ್ 2024, 15:16 IST
ಸಿ.ಸಿ.ಪಾಟೀಲ
ಸಿ.ಸಿ.ಪಾಟೀಲ   

ನರಗುಂದ: ‘ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರೀಯವಾಗಿದೆ. ಮುಡಾ ಹಗರಣ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯಿಂದ ₹50 ಕೋಟಿಗೆ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಸಂಚು ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದು ಸರಿಯಲ್ಲ. ಇದು ನಿಜವಿದ್ದರೆ ತಮ್ಮದೇ ಸರ್ಕಾರವಿದೆ, ತನಿಖೆ ನಡೆಸಲಿ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಶನಿವಾರ ನಡೆದ ರೈತ ಸಂಪರ್ಕ ಕೇಂದ್ರದ ಗೋದಾಮು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ತಮ್ಮ ಕೈಯಲ್ಲಿ ಎಸ್‌ಐಟಿ, ಲೋಕಾಯುಕ್ತ ಹಾಗೂ ಪೊಲೀಸರು ಇದ್ದಾರೆ. ಯಾವ ಶಾಸಕರು? ಎಷ್ಟು ಹಣ? ಹೇಗೆ ಆಫರ್ ಕೊಟ್ಟಿದ್ದಾರೆ ಎಂಬುವುದರ ಸಮಗ್ರ ತನಿಖೆ ನಡೆಸಬೇಕು. ಎರಡು ವರ್ಷ ಸುಮ್ಮನಿದ್ದು ಈಗ ಕೋವಿಡ್ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಶ್ರಿರಾಮುಲು ಮೇಲೆ ಆರೋಪ ಮಾಡುವುದು ಸರಿಯಲ್ಲ.  ಈ ಬಗ್ಗೆ ರಾಜ್ಯ ಸರ್ಕಾರ ಅವಲೋಕನ ಮಾಡಬೇಕು. ಮಾತಿಗೊಂದು ಎಸ್‌ಐಟಿ ರಚನೆ ಮಾಡುತ್ತಿರುವುದು ದ್ವೇಷದ ರಾಜಕಾರಣಕ್ಕೆ ಸಾಕ್ಷಿಯಾಗಿದೆ’ ಎಂದು ಟೀಕಿಸಿದರು.

ADVERTISEMENT

‘ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಸಂಪನ್ಮೂಲ ಕ್ರೂಡೀಕರಿಸಿ 224 ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲು ಮುಂದಾಗಬೇಕು. ಸಚಿವ ಜಮೀರ್ ಅಹ್ಮದ್ ಅವರು ಕುಮಾರಸ್ವಾಮಿ ಕುರಿತು ವರ್ಣ ನಿಂದನೆ ಮಾಡಿದ್ದು ಸರ್ಕಾರಕ್ಕೆ ಘನತೆ ತರುವಂತದಲ್ಲ. ಸಚಿವರ ಮೇಲೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಹಿಡಿತವಿಲ್ಲ’ ಎಂದರು.

ಸುವರ್ಣ ಸೌಧಕ್ಕೆ ಮುತ್ತಿಗೆ: ‘ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ನೀಡಲು ಕಳೆದ ಸರ್ಕಾರದಲ್ಲಿ ನಿರ್ಣಯಿಸಲಾಗಿದೆ. ಆದರೆ ಈವರೆಗೂ ಜಾರಿಯಾಗಿಲ್ಲ. ಆದ್ದರಿಂದ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಸುವರ್ಣ ಸೌಧಕ್ಕೆ ಟ್ರಾಕ್ಟರ್ ರ‍್ಯಾಲಿ ಮೂಲಕ ಮುತ್ತಿಗೆ ಹಾಕಲಾಗುವುದು’ ಎಂದರು.

ವಕ್ಫನಿಂದ ಯಾರಿಗೆ ಲಾಭ: ವಕ್ಫ್‌ನಿಂದ ಸಾಮಾನ್ಯ ಮುಸ್ಲಿಮರಿಗೆ ಲಾಭವಾಗಿಲ್ಲ. ಯಾರ ಏಳ್ಗೆಗೆ ಈ ವಕ್ಫ್ ಎಂಬುದು ತಿಳಿಯದಂತಾಗಿದೆ. ರೈತರ ಪಹಣಿಯಲ್ಲಿ ವಕ್ಫ್ ನಮೂದಿಸುವ ಬದಲು, ಅದರ ಆಸ್ತಿ ಯಾವ ರಾಜಕಾರಣಿ ಪಾಲಾಗಿದೆ ಎಂಬ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಎ.ಎಂ.ಹುಡೇದ, ಪ್ರಕಾಶಗೌಡ ತಿರಕನಗೌಡ್ರ, ಎಸ್.ಆರ್.ಪಾಟೀಲ, ಎನ್.ಕೆ.ಸೋಮಾಪುರ, ಅನ್ನಪೂರ್ಣ ಯಲಿಗಾರ, ಕಾಶವ್ವ ಮಳಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.