ADVERTISEMENT

ಗಜೇಂದ್ರಗಡ | ಮೂಲಸೌಲಭ್ಯ ಕೊರತೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 5:22 IST
Last Updated 1 ಸೆಪ್ಟೆಂಬರ್ 2025, 5:22 IST
ಗಜೇಂದ್ರಗಡದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು
ಗಜೇಂದ್ರಗಡದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು   

ಗಜೇಂದ್ರಗಡ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಮೂಲಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಶನಿವಾರ ತರಗತಿ ಬಹಿಷ್ಕರಿಸಿ ಎಸ್.ಎಫ್‌.ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

‘ಕಾಲೇಜು ಪ್ರಾರಂಭವಾಗಿ 13 ವರ್ಷ ಕಳೆದರೂ ಖಾಯಂ ಉಪನ್ಯಾಸಕರಿಲ್ಲ. ಅಲ್ಲದೆ, ಕಾಲೇಜಿನಲ್ಲಿ ವಿಷಯವಾರು ಉಪನ್ಯಾಸಕರೂ ಇಲ್ಲ. ಇದರಿಂದ ಕಲಿಕೆಗೆ ಸಮಸ್ಯೆ ಆಗುತ್ತಿದೆ. ಅಲ್ಲದೆ, ಕಾಲೇಜಿನಲ್ಲಿ ಮೂಲಸೌಲಭ್ಯ ಕೊರತೆ ಇದೆ. ಸಂಬಂಧಪಟ್ಟವರು ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

‘ಕಾಲೇಜಿನಲ್ಲಿ ಸುಮಾರು 450 ವಿದ್ಯಾರ್ಥಿಗಳಿದ್ದಾರೆ. ಕಾಲೇಜು ಪಟ್ಟಣದಿಂದ ಸುಮಾರು 2 ಕಿ.ಮೀ ದೂರದಲ್ಲಿದ್ದು, ಕಾಲೇಜಿಗೆ ತೆರಳಲು ಬಸ್‌ ವ್ಯವಸ್ಥೆಯಿಲ್ಲ. ಬಸ್‌ಗಳು ಕಾಲೇಜಿನ ಹತ್ತಿರ ನಿಲುಗಡೆ ಮಾಡುವುದಿಲ್ಲ. ಇದರಿಂದ ತರಗತಿಗಳಿಗೆ ಸಕಾಲದಲ್ಲಿ ಹಾಜರಾಗಲು ಆಗದೆ ತ್ತಿಲ್ಲ. ಈ ಕುರಿತು ಬಸ್‌ ಡಿಪೋ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಮಸ್ಯೆ ಬಗೆಹರಿಸಲು ಸ್ಥಳಕ್ಕೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಬರಬೇಕೆಂದು ಸಂಜೆವರೆಗೂ ಕಾಲೇಜಿನ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸಂಜೆ ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ, ಪಿಎಸ್‌ಐ ಪ್ರಕಾಶ ಡಿ. ಭೇಟಿ ನೀಡಿದರು. ಜಿಲ್ಲಾಧಿಕಾರಿ ಮೂಲಕ ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಮತ್ತು ನಿರ್ದೇಶಕರಿಗೆ ಮನವಿ ಸಲ್ಲಿಸುವುದರ ಜೊತೆಗೆ ಶಾಸಕರ ಗಮನಕ್ಕೂ ತಂದು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಬಳಿಕ ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿ, ಪ್ರತಿಭಟನೆ ಹಿಂಪಡೆದರು. ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಹೋರಾಟ ಮಾಡುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಎಸ್.ಎಫ್.ಐ ರಾಜ್ಯ ಘಟಕದ ಉಪಾಧ್ಯಕ್ಷ ಗಣೇಶ ರಾಠೋಡ, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರು ರಾಠೋಡ, ತಾಲ್ಲೂಕು ಅಧ್ಯಕ್ಷ ಅನಿಲ ರಾಠೋಡ, ಮುಖಂಡರಾದ ಪೀರು ರಾಠೋಡ, ಶರಣು ಮಾಟರಂಗಿ, ಮಹಾಂತೇಶ ಪೂಜಾರ, ವಿದ್ಯಾರ್ಥಿಗಳಾದ ಸೋಮಶೇಖರ ವಡ್ಡರ, ತನುಜಾ ರಾಯಬಾಗಿ, ಅನುಷಾ ತಳವಾರ, ಆಕಾಶ ಲಮಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.