
ಗದಗ: ಜಿಲ್ಲೆಯಲ್ಲಿ ಡಿ.7ರಂದು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಯಲಿದ್ದು, ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಟಿಇಟಿ ಪರೀಕ್ಷೆ ಕುರಿತು ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳಬೇಕು. ಗದಗ ಶಹರದ 27 ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆಗಳು ನಡೆಯಲಿದ್ದು ಅಲ್ಲಿ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯಗಳು ಇರುವಂತೆ ಗಮನ ಹರಿಸಬೇಕು. ಪರೀಕ್ಷಾ ಅವಧಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು’ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾತನಾಡಿ, ಪರೀಕ್ಷೆಯಲ್ಲಿ ಸಮಯ ಪರಿಪಾಲನೆ ಅತ್ಯವಶ್ಯಕವಾಗಿದ್ದು, ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗೋಡೆ ಗಡಿಯಾರಗಳು ಇರುವಂತೆ ನೋಡಿಕೊಳ್ಳಬೇಕು. ತುರ್ತು ವೈದ್ಯಕೀಯ ಸೇವೆ ಅಗತ್ಯವಿದ್ದಲ್ಲಿ ಆರೋಗ್ಯ ಇಲಾಖೆಯವರು ಈ ಕುರಿತು ಕ್ರಮವಹಿಸಬೇಕು. ಮಾರ್ಗಾಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು’ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಎಸ್.ಬುರುಡಿ ಮಾತನಾಡಿ, ‘ಟಿಇಟಿ ಪರೀಕ್ಷೆ ಡಿ.7ರಂದು ಗದಗ ಶಹರ ವಲಯದಲ್ಲಿ ಒಟ್ಟು 27 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳಿಗೆ 12 ಮಾರ್ಗಗಳನ್ನು ರಚಿಸಲಾಗಿದ್ದು, ಪ್ರಥಮ ಅಧಿವೇಶನ ಪರೀಕ್ಷೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ, ದ್ವಿತೀಯ ಅಧಿವೇಶನ ಪರೀಕ್ಷೆ ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ನಡೆಯಲಿದೆ’ ಎಂದು ತಿಳಿಸಿದರು.
ಸಭೆಯಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ, ಬಸ್ ಸಂಚಾರದ ಸೌಲಭ್ಯ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಗದಗ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು; ಮಹಾವೀರ ಜೈನ್ ಪ್ರಾಥಮಿಕ ಪ್ರೌಢಶಾಲೆ; ಬಸವೇಶ್ವರ ಪ್ರೌಢಶಾಲೆ; ಸಿಡಿಓ ಜೈನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ; ಜೆಸಿ ಪ್ರೌಢಶಾಲೆ; ಜಿಡಿ ಶಹ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ; ಸನ್ಮಾರ್ಗ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು; ಗುರುಬಸವ ಸಿಬಿಎಸ್‌ಇ ಆಂಗ್ಲ ಮಾಧ್ಯಮ ಪ್ರೌಢಶಾಲೆ; ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು; ಎಸ್.ಟಿ.ಎಸ್.ಕೆ.ಕೆ. ಪಾಲಿಟೆಕ್ನಿಕ್; ಕೆಎಲ್‌ಇ ಸೊಸೈಟಿ ಜೆ.ಟಿ. ಪಿ.ಯು.ಕಾಲೇಜು; ಕೆ.ಎಲ್.ಇ. ಕಲೆ ಮತ್ತು ವಾಣಿಜ್ಯ ಪಿಯು ಕಾಲೇಜು; ಕೆಎಲ್‌ಇಸಿ ಬಿ.ಎಸ್.ಇ; ಸೇಂಟ್ ಜಾನ್ ಹೈಸ್ಕೂಲ್ ಬೆಟಗೇರಿ; ಲೊಯಲಾ ಹೈಸ್ಕೂಲ್; ಎಎಸ್‌ಎಸ್ ಕಾಮರ್ಸ್ ಕಾಲೇಜು ಬೆಟಗೇರಿ; ಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ; ಜೆಟಿವಿಪಿ ಬಸವೇಶ್ವರ ಕಲೆ ವಾಣಿಜ್ಯ ವಿಜ್ಞಾನ ಕಾಲೇಜು; ಎಚ್.ಸಿ.ಇ.ಎಸ್. ಪಿಯು ಕಾಲೇಜು; ಬಿಪಿನ್ ಚಿಕ್ಕಟ್ಟಿ ಪಿಯು ಸೈನ್ಸ್ ಕಾಲೇಜು; ಮೈಲಾರಪ್ಪ ಮೆಣಸಗಿ ಹೈಸ್ಕೂಲ್; ಬ್ರೈಟ್ ಹಾರಿಜಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ; ವಿಡಿಎಸ್‌ಟಿ ಬಾಯ್ಸ್ ಹೈಸ್ಕೂಲ್; ವಿಡಿಎಸ್ ಎಸ್.ಪಿ.ಹುಯಿಲಗೋಳ ಗರ್ಲ್ಸ್ ಹೈಸ್ಕೂಲ್; ಸಿ.ಎಸ್.ಪಾಟೀಲ ಬಾಯ್ಸ್ ಸ್ಕೂಲ್; ಸಿಎಸ್ ಪಾಟೀಲ ಗರ್ಲ್ಸ್ ಸ್ಕೂಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜು.
ಪ್ರಥಮ ಅಧಿವೇಶನ ಪರೀಕ್ಷೆಗೆ 2159 ಅಭ್ಯರ್ಥಿಗಳು ಹಾಗೂ ದ್ವಿತೀಯ ಅಧಿವೇಶನ ಪರೀಕ್ಷೆಯಲ್ಲಿ 6391 ಅಭ್ಯರ್ಥಿಗಳು ಸೇರಿ ಒಟ್ಟು 8550 ಅಭ್ಯರ್ಥಿಗಳು ಟಿಇಟಿ ಪರೀಕ್ಷೆ ಬರೆಯಲಿದ್ದಾರೆ–ಆರ್.ಎಸ್.ಬುರುಡಿ, ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.