ಗಜೇಂದ್ರಗಡ: ಸಮೀಪದ ಮಾಟರಂಗಿ ಗ್ರಾಮದ ರೈತ ಗುರಿಕಾರ ಸಹೋದರರು ಹೈನುಗಾರಿಕೆ, ಮೇಕೆ -ಟಗರು ಸಾಕಣೆಯ ಜೊತೆಗೆ ರೇಷ್ಮೆ, ವಿಳ್ಯದೆಲೆ ಹಾಗೂ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದರ ಮೂಲಕ ಸಮಗ್ರ ಕೃಷಿಯಲ್ಲಿ ಯಶ ಕಂಡು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಶರಣಪ್ಪ ಗುರಿಕಾರ, ಗಂಗಾಧರ ಗುರಿಕಾರ, ನಾಗಪ್ಪ ಗುರಿಕಾರ ಸಹೋದರರ 7 ಎಕರೆ ಸ್ವಂತ ಜಮೀನಿದ್ದು, 3 ಕೊಳವೆ ಬಾವಿಗಳಿಂದ ಸಿಗುವ 2.5 ಇಂಚು ನೀರಿನಲ್ಲಿ ಒಂದು ಎಕರೆ ವಿಳ್ಯದೆಲೆ, ಒಂದು ಎಕರೆ ಹಿಪ್ಪು ನೇರಳೆ ಬೆಳೆದಿದ್ದಾರೆ. ಉಳಿದ ಜಮೀನಿನಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಬೀಜೋತ್ಪಾದನೆ ಹತ್ತಿ, ಬಿಟಿ ಹತ್ತಿ, ಗೋವಿನಜೋಳ, ಅಲಸಂದಿ ಬೆಳೆಯುತ್ತಿದ್ದಾರೆ. ಅಲ್ಲದೆ ಸುಮಾರು 15 ಎಕರೆ ಜಮೀನು ಲಾವಣಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಲಾವಣಿಗೆ ಪಡೆದ ಜಮೀನಿನಲ್ಲಿ 6 ಎಕರೆ ಗೋವಿನಜೋಳ, 2 ಎಕರೆ ಬೀಜೋತ್ಪಾದನೆ ಹತ್ತಿ, 2 ಬಿಟಿ ಹತ್ತಿ, 2 ಎಕರೆ ಅಲಸಂದಿ ಬಿತ್ತನೆ ಮಾಡಿದ್ದಾರೆ.
ಕೃಷಿ ಜೊತೆಗೆ ಹೈನುಗಾರಿಕೆ, ಮೇಕೆ, ಟಗರು, ಕೋಳಿ ಸಾಕಾಣಿಕೆ ಮಾಡುತ್ತಿದ್ದು, 3 ಆಕಳು, 2 ಎಮ್ಮೆ, 10 ಮೇಕೆ, 10 ಟಗರು, 20 ಕೋಳಿ ಸಾಕಿದ್ದಾರೆ. ಹೈನುಗಾರಿಕೆಯಿಂದ ಪ್ರತಿದಿನ 6-7 ಲೀ. ಹಾಲು ಡೈರಿಗೆ ಹಾಕುತ್ತಿದ್ದು, ಅದರಿಂದ ಬಂದ ಹಣ ಮನೆ ಖರ್ಚು ಕಳೆಯುತ್ತಿದೆ. ಅಲ್ಲದೆ ಹಿಪ್ಪು ನೇರಳೆಯನ್ನು ಮೇಕೆ, ಟಗರುಗಳಿಗೆ ಮೇವಾಗಿ ಬಳಸುತ್ತಿದ್ದಾರೆ. ವರ್ಷದಲ್ಲಿ ಎರಡು ಬಾರಿ ಮೇಕೆ, ಟಗರುಗಳನ್ನು ಮಾರಾಟ ಮಾಡಿ ಅದರಿಂದ ₹1ಲಕ್ಷದಿಂದ ₹1.5 ಲಕ್ಷ ಲಾಭ ಗಳಿಸುತ್ತಿದ್ದಾರೆ. ವಿಳ್ಯದೆಲೆ ತೋಟವನ್ನು ಶರಣಪ್ಪ ಗುರಿಕಾರ ಅವರ ಮಗ ಸಂಜೀವ ಗುರಿಕಾರ ನಿರ್ವಹಣೆ ಮಾಡುತ್ತಿದ್ದು, ಅದರಿಂದ ವರ್ಷಕ್ಕೆ ಖರ್ಚು ಹಿಡಿದು ಸುಮಾರು ₹7 ಲಕ್ಷ ಆದಾಯ ಬರುತ್ತಿದೆ.
ಗುರಿಕಾರ ಅವರ ಜಮೀನು ನಮ್ಮ ಜಮೀನಿನ ಪಕ್ಕದಲ್ಲಿಯೇ ಇದೆ. ಕೃಷಿಯಲ್ಲಿ ಕೂಲಿ ಕಾರ್ಮಿಕರ ಖರ್ಚು ಹೆಚ್ಚು ಬರುತ್ತದೆ. ಆದರೆ ಗುರಿಕಾರ ಕುಟುಂಬದ ಎಲ್ಲರೂ ಜಮೀನಿನಲ್ಲಿ ಕಷ್ಟಪಡುತ್ತಾರೆ. ಹೀಗಾಗಿ ಸ್ವಲ್ಪ ಮಟ್ಟಿಗೆ ಕೂಲಿಕಾರ್ಮಿಕರ ಸಮಸ್ಯೆ ಕಡಿಮೆ. ಗುರಿಕಾರ ಕುಟುಂಬ ಸಮಗ್ರ ಕೃಷಿಯಲ್ಲಿ ಲಾಭದ ಜೊತೆಗೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ ಎನ್ನುತ್ತಾರೆ ಮಾಟರಂಗಿ ಗ್ರಾಮದ ಯುವ ರೈತ ಚನ್ನಬಸವ ಕರಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.