ADVERTISEMENT

ಬಸವಮಾರ್ಗದ ಹರಿಕಾರನಿಗೆ ನುಡಿ ನಮನ

ಗದುಗಿನಲ್ಲಿ ತೋಂಟದ ಸಿದ್ದಲಿಂಗ ಶ್ರೀಗಳ ಪ್ರಥಮ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 14:29 IST
Last Updated 9 ಅಕ್ಟೋಬರ್ 2019, 14:29 IST
ಗದುಗಿನಲ್ಲಿ ಬುಧವಾರ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಜಾಗೃತ ಸಮಾಧಿಗೆ ಮಠಾಧೀಶರು ಪುಷ್ಪ ನಮನ ಸಲ್ಲಿಸಿದರು. ತೋಂಟದ ಸಿದ್ಧರಾಮ ಸ್ವಾಮೀಜಿ, ನಿಜಗುಣ ಪ್ರಭು ಸ್ವಾಮೀಜಿ, ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಬಸವ ಜಯಮೃತ್ಯುಂಜಯ ಸ್ವಾಮೀಜಿ, ಡಾ.ಬಸವಲಿಂಗ ಸ್ವಾಮೀಜಿ ಇದ್ದರು
ಗದುಗಿನಲ್ಲಿ ಬುಧವಾರ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಜಾಗೃತ ಸಮಾಧಿಗೆ ಮಠಾಧೀಶರು ಪುಷ್ಪ ನಮನ ಸಲ್ಲಿಸಿದರು. ತೋಂಟದ ಸಿದ್ಧರಾಮ ಸ್ವಾಮೀಜಿ, ನಿಜಗುಣ ಪ್ರಭು ಸ್ವಾಮೀಜಿ, ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಬಸವ ಜಯಮೃತ್ಯುಂಜಯ ಸ್ವಾಮೀಜಿ, ಡಾ.ಬಸವಲಿಂಗ ಸ್ವಾಮೀಜಿ ಇದ್ದರು   

ಗದಗ: ‘ಬಸವಣ್ಣನ ಭಕ್ತಿ, ಅಲ್ಲಮಪ್ರಭುವಿನ ಜ್ಞಾನ, ಅಕ್ಕಮಹಾದೇವಿಯ ತ್ಯಾಗ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳಲ್ಲಿ ಸಂಗಮವಾಗಿತ್ತು. ಹೀಗಾಗಿ ಅವರ ಬದುಕು ಉಳಿದ ಮಠಾಧೀಶರಿಗೂ ಆದರ್ಶ’ ಎಂದು ಆದಿಚುಂಚನಗಿರಿ ಸಂಸ್ಥಾನಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಇಲ್ಲಿನ ತೋಂಟದಾರ್ಯ ಮಠದ ಆವರಣದಲ್ಲಿ ಬುಧವಾರ ನಡೆದ ಸಿದ್ಧಲಿಂಗ ಶ್ರೀಗಳ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆದಿಚುಂಚನಗಿರಿ ಮಠಕ್ಕೂ ಗದುಗಿನ ತೋಂಟದಾರ್ಯ ಸಂಸ್ಥಾನ ಮಠಕ್ಕೂ ಅವಿನಾಭಾವ ನಂಟಿದೆ ಎಂದು ವಿವರಿಸಿದರ ಅವರು, ಸಿದ್ಧಲಿಂಗ ಶ್ರೀಗಳು ನಮಗೂ ಸ್ಫೂರ್ತಿ‘ ಎಂದರು.

ADVERTISEMENT

‘ದಲಿತಪರವಾದ ಚಿಂತನೆಗಳು ಈ ನಾಡಿನಲ್ಲಿ ಉಳಿಯಬೇಕು ಎನ್ನುವುದು ತೋಂಟದ ಶ್ರೀಗಳ ಆಶಯವಾಗಿತ್ತು. ಹೀಗಾಗಿ ಈ ದೇಶದ ಧಾರ್ಮಿಕ ಸಂವಿಧಾನ ವಚನ ಸಾಹಿತ್ಯ ಆಗಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದರು’ ಎಂದು ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣಪ್ರಭು ಸ್ವಾಮೀಜಿ ನುಡಿ ನಮನ ಸಲ್ಲಿಸಿದರು.

‘ಸ್ವಾಮೀಜಿಗಳು ಗಟ್ಟಿತನದಿಂದ ಏನೇ ಮಾತನಾಡಿದರೂ ಅದನ್ನು ತಾಯಿ ಹೃದಯದಿಂದ ಸಮರ್ಥಿಸಿಕೊಳ್ಳುತ್ತಿದ್ದರು. ಇದೀಗ ವಾಸ್ತವಿಕತೆ ಬಗ್ಗೆ ಮಾತನಾಡಲು ಭಯ ಆಗುತ್ತದೆ. ನಮ್ಮ ಬೆನ್ನ ಹಿಂದೆ ಯಾರಿದ್ದಾರೆ, ಮೊದಲಿನಂತೆ ಸಮರ್ಥಿಸಿಕೊಳ್ಳುವವರು ಯಾರು ಎಂಬ ಆತಂಕ ಕಾಡುತ್ತಿದೆ’ ಎಂದರು.

ಮಠದ ಆವರಣದಲ್ಲಿನ ಅನುಭವ ಮಂಟಪದಲ್ಲಿ ನಿರ್ಮಿಸಿರುವ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಪುತ್ಥಳಿಯನ್ನು ಸಂಸದ ರಮೇಶ ಜಿಗಜಿಣಗಿ ಅನಾವರಣಗೊಳಿಸಿದರು. ‘ಬಸವ ತತ್ವವೇ ಶ್ರೀಗಳ ಜೀವನವಾಗಿತ್ತು. ಜಾತಿಯನ್ನು ಮೀರಿ, ಪ್ರೀತಿ ಮೆರೆದ ಸ್ವಾಮೀಜಿ ಅವರು’ ಎಂದು ಜಿಗಜಿಣಗಿ ಅಭಿಪ್ರಾಯಪಟ್ಟರು.

‘ಶಿವಾನುಭವ ಕಾರ್ಯಕ್ರಮಗಳ ಮೂಲಕ ಶ್ರೀಗಳು ಜನರಲ್ಲಿ ಜಾತ್ಯತೀತ ಭಾವನೆ ಬೆಳೆಸುತ್ತಿದ್ದರು. ಕಾಯಕ, ದಾಸೋಹ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು’ ಎಂದು ವಿಧಾನಪರಿಷತ್‌ ಸದಸ್ಯ ಎಸ್.ವಿ. ಸಂಕನೂರ ಸ್ಮರಿಸಿದರು.

‘ತೋಂಟದ ಬಸವಣ್ಣ’, ‘ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ‘, ‘ಜಗದ್ವಂದ್ಯ ಸೌಹಾರ್ದ ಗುರು’ ಹಾಗೂ ‘ಕ್ರಾಂತಿಮಾತೆ ಅಕ್ಕನಾಗಮ್ಮ’ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಕಲ್ಬುರ್ಗಿ ಶ್ರೀಶೈಲ ಸಾರಂಗಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಇಳಕಲ್ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ, ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ, ಸಂಡೂರಿನ ಪ್ರಭು ಮಹಾಸ್ವಾಮೀಜಿ, ಅರಸಿಕೆರೆ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿದ್ದಲಿಂಗೇಶ ಪಾಟೀಲ ಇದ್ದರು.

ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಸ್ವಾಗತಿಸಿದರು. ವಿವೇಕಾನಂದಗೌಡ ಪಾಟೀಲ, ಶೇಖಣ್ಣ ಕವಳಿಕಾಯಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಾಸಕ ಎಚ್.ಕೆ. ಪಾಟೀಲ ಹಾಗೂ ಕಾರ್ಯಕ್ರಮದ ಬಳಿಕ ರೋಣ ಶಾಸಕ ಕಳಕಪ್ಪ ಬಂಡಿ ಅವರು ಶ್ರೀಮಠಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.