ಗದಗ: ‘ರಾಜ್ಯದಲ್ಲಿನ 10 ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹50 ಕೋಟಿ ಅನುದಾನ ಮೀಸಲಿಟ್ಟಿದೆ. ಅದರಂತೆ ₹5 ಕೋಟಿ ವೆಚ್ಚದಲ್ಲಿ ಲಕ್ಕುಂಡಿಯಲ್ಲಿ ಮೂಲಸೌಕರ್ಯ ಮತ್ತು ಇತರೆ ಕ್ಷೇತ್ರಗಳ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಬಹುದು. ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಆದ್ಯತಾ ಪಟ್ಟಿ ಸಲ್ಲಿಸಬೇಕು’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ತಯಾರಿಸಿದ ₹804 ಕೋಟಿ ವೆಚ್ಚದ ನೀಲನಕ್ಷೆ ಅನುಸಾರದಂತೆ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಲಕ್ಕುಂಡಿ ಪ್ರವಾಸೋದ್ಯಮ ಉತ್ತೇಜಿಸುವ ದೃಷ್ಟಿಯಿಂದ ಪ್ರವಾಸಿಗರು ಸಂಚರಿಸುವ ಮಾರ್ಗದ ನೀಲನಕ್ಷೆ ತಯಾರಿಸುವುದು ಸೂಕ್ತ. ಜತೆಗೆ ಕಪ್ಪತಗುಡ್ಡದಲ್ಲಿ ಸಫಾರಿ ಆರಂಭ ಮತ್ತು ಬಿಂಕದಕಟ್ಟಿ ಮೃಗಾಲಯದಲ್ಲಿ ನೈಟ್ ಸಫಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.
ಗೋವಾದಿಂದ ಗದಗ– ಕೊಪ್ಪಳ ಮಾರ್ಗವಾಗಿ ಹಂಪಿಗೆ ತೆರಳುವ ಪ್ರವಾಸಿಗರ ಸಂಖ್ಯೆ ಅಧಿಕವಿದೆ. ಹಾಗಾಗಿ ಲಕ್ಕುಂಡಿ ಸಮೀಪದ ಹೆದ್ದಾರಿ ಮಾರ್ಗದಲ್ಲಿ ನಾಮಫಲಕ ಅಳವಡಿಸಬೇಕು. ಲಕ್ಕುಂಡಿ ಒಳ ಬರುವ ಮತ್ತು ಹೊರ ಹೋಗುವ ಹೆದ್ದಾರಿಯಲ್ಲಿ ಎರಡು ಪ್ರವೇಶದ್ವಾರ ನಿರ್ಮಾಣದ ವಿಷಯ ಚರ್ಚೆ ಆಯಿತು. ಪ್ರವೇಶದ್ವಾರಗಳನ್ನು ಕಲ್ಲಿನ ಕಮಾನುಗಳ ಮೂಲಕ ನಿಮಿರ್ಸುವುದು ಸೂಕ್ತ ಎಂದು ಅಧಿಕಾರಿಗಳು ಸಲಹೆ ನೀಡಿದರು.
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸದಸ್ಯರಾದ ಜೆ.ಕೆ.ಜಮಾದಾರ, ಆರ್.ಆರ್. ಓದುಗೌಡರ, ವಿವೇಕಾನಂದ ಗೌಡ ಪಾಟೀಲ, ಗೀತಾಂಜಲಿ ರಾವ್, ಅ.ದ.ಕಟ್ಟಿಮನಿ, ಕಿಶೋರ್ ಬಾಬು ನಾಗರಕಟ್ಟೆ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಪ್ರವಾಸೋದ್ಯಮ ಇಲಾಖೆ ಆಯುಕ್ತ ಕೆ.ವಿ.ರಾಜೇಂದ್ರಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಭರತ್ ಎಸ್., ಎಸ್‌ಪಿ ರೋಹನ್ ಜಗದೀಶ್, ಡಿಸಿಎಫ್ ಸಂತೋಷ ಕುಮಾರ, ಪ್ರವಾಸೋದ್ಯಮ ಇಲಾಖೆ ಜಂಟಿ ಆಯುಕ್ತ ಶ್ರೀನಿವಾಸ್, ಜಂಟಿ ನಿರ್ದೇಶಕ ಜನಾರ್ದನ, ಅರಣ್ಯ, ವಸತಿ ವಿಹಾರಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಸಂಖಿಮಠ, ಪುರಾತತ್ವ ಇಲಾಖೆ ಆಯುಕ್ತ ಎ.ದೇವರಾಜ್, ಮಂಜುನಾಥ್ ಚೌಹಾಣ, ನಾಗರಾಜ್ ಹಂಪಿ, ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ಸದಸ್ಯ ಸಿದ್ದು ಪಾಟೀಲ, ಅಶೋಕ ಮಂದಾಲಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಕೊಟ್ರೇಶ್ವರ ವಿಭೂತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ವೀರಯ್ಯಸ್ವಾಮಿ, ವಾರ್ತಾ ಇಲಾಖೆ ಅಧಿಕಾರಿ ವಸಂತ ಮಡ್ಲೂರ ಇದ್ದರು.
₹50 ಲಕ್ಷಕ್ಕೆ ಆಡಳಿತಾತ್ಮಕ ಅನುಮೋದನೆ
‘ಲಕ್ಕುಂಡಿಯಲ್ಲಿ ಮಾಹಿತಿ ಫಲಕಗಳು ಮತ್ತು ಇತಿಹಾಸ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಲು 5 ಪುಸ್ತಕಗಳ ಪ್ರಕಟಣೆ ಪುನರ್ ಮುದ್ರಣ ಲಕ್ಕುಂಡಿ ಮಾಹಿತಿ ಕೈಪಿಡಿ ಮುದ್ರಣ ಮತ್ತು ಲಕ್ಕುಂಡಿಗೆ ಸಂಬಂಧಿಸಿದಂತೆ 10 ವಿಡಿಯೊ ನಿರ್ಮಾಣಕ್ಕೆ ₹89 ಲಕ್ಷದ ಪ್ರಸ್ತಾವ ಸಲ್ಲಿಸಲಾಗಿತ್ತು. ಅದರಲ್ಲಿ ₹50 ಲಕ್ಷಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಆದಷ್ಟು ಬೇಗ ಈ ಕಾರ್ಯ ಆರಂಭಿಸಬೇಕು’ ಎಂದು ಸೂಚಿಸಿದರು. ಲಕ್ಕುಂಡಿಯಲ್ಲಿ ಐತಿಹಾಸಿಕ ದೇವಸ್ಥಾನಗಳ ರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ 7 ರಿಂದ 8 ಮನೆಗಳು ಸ್ಥಳಾಂತರ ಮಾಡಬೇಕಿದೆ. ಮನೆಗಳ ಮೌಲ್ಯವನ್ನು ಗುರುತಿಸಿ ಪರಿಹಾರ ನೀಡಿ ಸ್ಥಳಾಂತರಿಸಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ‘ಲಕ್ಕುಂಡಿಯ ಕಾಶಿ ವಿಶ್ವನಾಥ ದೇವಾಲಯ ಹತ್ತಿರದಲ್ಲಿ ಪ್ರವಾಸಿಗರ ಮೂಲಸೌಕರ್ಯಕ್ಕಾಗಿ ಭೂಮಿ ಲಭ್ಯತೆ ಮತ್ತು ಅನುದಾನ ಇದೆ. ಜತೆಗೆ ಗದಗ ಕೊಪ್ಪಳ ಹೆದ್ದಾರಿಯಲ್ಲೂ ಶೌಚಾಲಯ ನಿರ್ಮಾಣ ಮಾಡಬಹುದು’ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.