ಗದಗ: ‘ಹನಿ ನೀರಾವರಿ, ಬೆಳೆಗಳಿಗೆ ಹನಿ ನೀರಿನೊಂದಿಗೆ ಪೋಷಕಾಂಶಗಳನ್ನೂ ನೀಡುವ ಫರ್ಟಿಗೇಷನ್ ಮತ್ತು ಡಿಜಿಟಲ್ ಫಾರ್ಮಿಂಗ್‌ನಂಥ ವಿಷಯಗಳಲ್ಲಿ ರೈತರಿಗೆ ಸೂಕ್ತ ತರಬೇತಿ ನೀಡುವುದು ಅತ್ಯವಶ್ಯಕ’ ಎಂದು ವಾಲ್ಮಿ ನಿರ್ದೇಶಕ ಡಾ. ಗಿರೀಶ್ ಮರಡ್ಡಿ ಹೇಳಿದರು.
ಸಿಂಗಟಾಲೂರು ಏತ ನೀರಾವರಿ ಯೋಜನೆಯ 3ನೇ ಹಂತದ ಪ್ರದೇಶಗಳ ವ್ಯಾಪ್ತಿಗೆ ಬರುವ ರೈತರಿಗಾಗಿ ಯೋಜನಾ ಅನುಷ್ಠಾನ ಸಂಸ್ಥೆ ನೇಟಾಫಿಮ್ ಇಂಡಿಯಾ ತನ್ನ ಪ್ರಗತಿ ಯೋಜನೆಯಡಿ ಆಯೋಜಿಸಿದ್ದ ತರಬೇತಿ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲಕಾಲಕ್ಕೆ ಮಣ್ಣಿನ ಫಲವತ್ತೆಯ ಪರೀಕ್ಷೆ ಮತ್ತು ಬೆಳೆಗಳಿಗೆ ಸೂಕ್ತ ಪೌಷ್ಠಿಕಾಂಶ ಒದಗಿಸುವ ಮೂಲಕ ಇಳವರಿ ಹೆಚ್ಚಿಸಬಹುದು. ನೇಟಾಫಿಮ್ ರೂಪಿಸಿರುವ ಪ್ರಗತಿ ಕಾರ್ಯಕ್ರಮವು ಎಸ್‌ಎಲ್‌ಐಎಸ್- 3 ಯೋಜನೆಯ ವ್ಯಾಪ್ತಿಗೆ ಬರುವ ರೈತರ ಸಬಲೀಕರಣದತ್ತ ದೃಢಹೆಜ್ಜೆಯಾಗಿದೆ. ಇಂಥ ಕಾರ್ಯಕ್ರಮಗಳು ಇಳುವರಿ ಹೆಚ್ಚಳ, ಸಂಪನ್ಮೂಲಗಳ ಕ್ಷಮತೆಯ ನಿರ್ವಹಣೆ ಮತ್ತು ಸುಸ್ಥಿರ ವಿಧಾನಗಳ ಅಳವಡಿಕೆಗೆ ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದರು.
ಪ್ರಗತಿಪರ ರೈತರು ಅನುಸರಿಸುತ್ತಿರುವ ಉತ್ತಮ ಕೃಷಿ ವಿಧಾನಗಳನ್ನು ಇತರರಿಗೆ ತಿಳಿಸುವ ಮತ್ತು ಹನಿ ನೀರಾವರಿ ವ್ಯವಸ್ಥೆಯಡಿ ಹೊಸ ವಿದ್ಯಮಾನಗಳ ತರಬೇತಿ ನೀಡುವ ಉದ್ದೇಶದೊಂದಿಗೆ ಪ್ರಗತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಲಕ್ಷ್ಮಣ್ ಜೋಗ್ಡಂಕರ್, ಎಂಇಐಎಲ್‌ನ ಜನರಲ್ ಮ್ಯಾನೇಜರ್ ಮೈಲಸಾಮಿ ಎಂ., ನೇಟಾಫಿಮ್‌ನ ಎಜಿಎಂಗಳಾದ ಗಿರೀಶ್ ದೇಶಪಾಂಡೆ ಮತ್ತು ಉಮೇಶ್ ಎಂ.ಸಿ. ಮಾತನಾಡಿದರು.
ಜೋಳ, ಸೂರ್ಯಕಾಂತಿ, ಹೆಸರು, ಈರುಳ್ಳಿ, ಮೆಣಸು, ಹೂವು ಇತ್ಯಾದಿ ಬೆಳೆಗಳನ್ನು ಬೆಳೆಯುವ ರೈತರು ಭಾಗವಹಿಸಿದ್ದರು. ಪ್ರತಿ ಬೆಳೆಯಲ್ಲಿಯೂ ಪೌಷ್ಟಿಕಾಂಶಯುಕ್ತ ಹನಿ ನೀರಾವರಿ ಪದ್ಧತಿಯನ್ನು ಯಶಸ್ವಿಯಾಗಿ ಅಳವಡಿಸುವ ಕುರಿತು ಮಾಹಿತಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.