ADVERTISEMENT

ಉಕ್ಕಿ ಹರಿಯುತ್ತಿರುವ ತುಂಗಭದ್ರೆ; ಜನರಲ್ಲಿ ಹರ್ಷ

ಕಾಶಿನಾಥ ಬಿಳಿಮಗ್ಗದ
Published 20 ಆಗಸ್ಟ್ 2025, 4:51 IST
Last Updated 20 ಆಗಸ್ಟ್ 2025, 4:51 IST
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನಿಂದ ಹೊರ ಹರಿಯುತ್ತಿರುವ ನೀರು
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನಿಂದ ಹೊರ ಹರಿಯುತ್ತಿರುವ ನೀರು   

ಮುಂಡರಗಿ: ಶಿವಮೊಗ್ಗ, ಮಲೆನಾಡು ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ತುಂಗಭದ್ರಾ ನದಿ ಈಗ ಉಕ್ಕಿ ಹರಿಯುತ್ತಲಿದೆ. ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ನಿರ್ಮಿಸಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್‌ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತಿದೆ.

ತುಂಗಭದ್ರಾ ನದಿಯನ್ನು ಸಂಪರ್ಕಿಸುವ ತುಂಗಾ ಜಲಾಶಯದಿಂದ ಮಂಗಳವಾರ ತುಂಗಭದ್ರಾ ನದಿಗೆ 77,000 ಕ್ಯುಸೆಕ್ ಹಾಗೂ ಭದ್ರಾ ಜಲಾಶಯದಿಂದ 44,000 ಕ್ಯುಸೆಕ್ ನೀರು ಹರಿಸಲಾಗಿದೆ. ಜತೆಗೆ ಹತ್ತಿರದ ವರದಾ ನದಿಯಿಂದ 16,209 ಕ್ಯುಸೆಕ್ ನೀರು ತುಂಗಭದ್ರೆಯ ಒಡಲು ಸೇರಿದೆ. ಇದರಿಂದಾಗಿ ತಾಲ್ಲೂಕಿನಾದ್ಯಂತ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ.

ಹಮ್ಮಿಗಿ ಗ್ರಾಮದಲ್ಲಿ ನಿರ್ಮಿಸಿರುವ ಶಿಂಗಟಾಲೂರ ಏತ ನೀರಾವರಿ ಬ್ಯಾರೇಜ್‌ಗೆ ಆ.13ರಂದು 25,178 ಕ್ಯುಸೆಕ್, ಆ.14ರಂದು 28,887 ಕ್ಯುಸೆಕ್, 15ರಂದು 29,028 ಕ್ಯುಸೆಕ್, 16ರಂದು 30,899 ಕ್ಯುಸೆಕ್, 17ರಂದು 42,660, 18ರಂದು 63,743 ಕ್ಯುಸೆಕ್ ಹಾಗೂ 19ರಂದು 1,50,406 ಕ್ಯುಸೆಕ್ ನೀರು ಹರಿದು ಬಂದಿದೆ.

ADVERTISEMENT

ಬ್ಯಾರೇಜಿನ 26 ಗೇಟ್‌ಗಳ ಪೈಕಿ ಮಂಗಳವಾರ 16 ಗೇಟ್‌ಗಳನ್ನು ತೆರೆಯಲಾಗಿದ್ದು, ಅವುಗಳ ಮೂಲಕ ಬ್ಯಾರೇಜಿಗೆ ಬಂದಷ್ಟು ಪ್ರಮಾಣದ ನೀರನ್ನು ತುಂಗಭದ್ರಾ ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ. ತಾಲ್ಲೂಕಿನ ಈರಣ್ಣನ ಗುಡ್ಡ, ಶಿಂಗಟಾಲೂರು, ಶೀರನಹಳ್ಳಿ, ಗಂಗಾಪುರ, ಕೊರ್ಲಹಳ್ಳಿ, ಕಕ್ಕೂರು, ಹೆಸರೂರು ಮೊದಲಾದ ಗ್ರಾಮಗಳ ಮುಂದೆ ತುಂಗಭದ್ರೆ ನದಿ ತುಂಬಿ ಹರಿಯುತ್ತಿದೆ.

ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯ ಕೆಲವು ಕ್ರಸ್ಟ್‌ಗೇಟ್‌ ದುರ್ಬಲವಾಗಿದ್ದು, ಕಡಿಮೆ ಪ್ರಮಾಣದ ನೀರು ಸಂಗ್ರಹಕ್ಕೆ ಟಿಬಿ ಬೋರ್ಡ್ ಮುಂದಾಗಿದೆ ಎಂದು ಹೇಳಲಾಗುತ್ತಿದ್ದು, ಕಾರಣ ಟಿಬಿ ಜಲಾಶಯ ಮೂಲಕ ನಿತ್ಯ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಸುತ್ತಿದ್ದು, ತಾಲ್ಲೂಕಿನ ನದಿ ದಂಡೆಯ ಗ್ರಾಮಸ್ಥರು ಆತಂಕ ಪಡಬೇಕಿಲ್ಲ ಎಂದು ಹೇಳಲಾಗುತ್ತಿದೆ.

ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಒಂದೆರಡು ದಿನಗಳಲ್ಲಿ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರಲಿದೆ. ಟಿಬಿ ಜಲಾಶಯದಿಂದ ನಿತ್ಯ ನೀರನ್ನು ಹೊರ ಹರಿಸುತ್ತಿರುವುದರಿಂದ ನದಿ ಪಾತ್ರದ ಗ್ರಾಮಸ್ಥರು ಆತಂಕ ಪಡಬೇಕಿಲ್ಲ
ರಾಘವೇಂದ್ರ, ಎಇಇ, ಶಿಂಗಟಾಲೂರ ಬ್ಯಾರೇಜ್

ಜಿಲ್ಲೆಯ ಪ್ರಮುಖ ಜಲಮೂಲ 

ಬಹುಗ್ರಾಮ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ಹಲವಾರು ಪಟ್ಟಣ ಹಾಗೂ ಗ್ರಾಮಗಳಿಗೆ ಹಮ್ಮಿಗಿ ಗ್ರಾಮದ ಬಳಿಯ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನಿಂದ ನಿತ್ಯ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಗರಿಷ್ಠ 3 ಟಿಎಂಸಿ ಅಡಿ ಸಾಮರ್ಥ್ಯದ ಬ್ಯಾರೇಜ್‌ನಲ್ಲಿ ಸದ್ಯ 1.9 ಟಿಎಂಸಿ ಅಡಿ ನೀರು ಸಂಗ್ರಹವಿದ್ದು ಜಿಲ್ಲೆಯ ಜನತೆಗೆ ವರ್ಷದುದ್ದಕ್ಕೂ ನಿರಾಳವಾಗಿ ನೀರು ಪೂರೈಸಬಹುದಾಗಿದೆ. ಜೊತೆಗೆ ಗದಗ ವಿಜಯನಗರ ಕೊಪ್ಪಳ ಜಿಲ್ಲೆಗಳ ಕೆಲವು ತಾಲ್ಲೂಕುಗಳ ರೈತರ ಸಿಮಿತ ಜಮೀನುಗಳಿಗೆ ನೀರು ಒದಗಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.